ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ರಕರ್ತರೆದುರು ಮುಲಾಜಿಲ್ಲದೆ ಬಟ್ಟೆ ಬಿಚ್ಚಿದ ಅಮರ್ ಸಿಂಗ್!
(Amar Singh | Uttar Pradesh | Samajwadi Party | Lavish Lifestyle)
ಪತ್ರಕರ್ತರೆದುರು ಮುಲಾಜಿಲ್ಲದೆ ಬಟ್ಟೆ ಬಿಚ್ಚಿದ ಅಮರ್ ಸಿಂಗ್!
ಕಾನ್ಪುರ, ಶುಕ್ರವಾರ, 11 ಫೆಬ್ರವರಿ 2011( 15:01 IST )
ಅದು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಕರೆದಿದ್ದ ಪತ್ರಿಕಾಗೋಷ್ಠಿ. ತನ್ನ ವಿರುದ್ಧ ಬಂದಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಲು ಮುಂದಾಗಿದ್ದ ಅವರು, ಪತ್ರಕರ್ತರು ನೋಡನೋಡುತ್ತಿದ್ದಂತೆ ಪೈಜಾಮವನ್ನು ಬಿಚ್ಚಿ ಬಹುತೇಕ ಬೆತ್ತಲೆಯಾದರು. ಒಂದು ಕ್ಷಣ ಅವಕ್ಕಾದ ಪತ್ರಕರ್ತರು ಸುಧಾರಿಸಿಕೊಂಡು, ಸಮಸ್ಯೆಯೇನು ಎಂಬುದರ ಕುರಿತು ಪ್ರಶ್ನಿಸಲಾರಂಭಿಸಿದರು.
PR
ಉತ್ತರ ಪ್ರದೇಶದಿಂದ ಪ್ರತ್ಯೇಕ ರಾಜ್ಯವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಆಗ್ರಹಿಸಿ ಅಮರ್ ಸಿಂಗ್ ನಡೆಸುತ್ತಿರುವ 'ಪೂರ್ವಾಂಚಲ ಯಾತ್ರೆ'ಯ ಬಗೆಗಿನ ಪುಕಾರುಗಳಿಗೆ ಸ್ಪಷ್ಟನೆ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯದು. ತಾನು ಐಷಾರಾಮಿ ವಾಹನಗಳಲ್ಲಿ ತೆರಳುತ್ತೇನೆ ಎಂಬ ಆರೋಪಗಳಿಗೆ ಉತ್ತರ ನೀಡುವುದು ಸಿಂಗ್ ಉದ್ದೇಶವಾಗಿತ್ತು.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ನಾನು ಈ ಹಿಂದೆ ಕಿಡ್ನಿ ಬದಲಾವಣೆ ಮಾಡಿಕೊಂಡಿದ್ದೆ. ಜತೆಗೆ ಡಯಾಬಿಟೀಸ್ ಬೇರೆ ಇದೆ ಎಂದ ಅವರು, ತನ್ನ ಪ್ಯಾಂಟ್ ಬಿಚ್ಚಿ ಕಾಲುಗಳಲ್ಲಿ ಆಗಿರುವ ಗಾಯಗಳನ್ನು ತೋರಿಸಿದರು. ಯಾತ್ರೆಯ ಕಾರಣದಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದರು.
ನಾನು ಐಷಾರಾಮಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಹಿಂಬಾಲಕರು ಆರೋಪಿಸುತ್ತಿದ್ದಾರೆ. ಹಾಗಾಗಿ ನಾನು ನನ್ನ ದೇಹದಲ್ಲಾಗಿರುವ ಗಾಯಗಳನ್ನು ತೋರಿಸಬೇಕಾದ ಅನಿವಾರ್ಯ ಸ್ಥಿತಿ ಬಂತು. ಬರಿಗಾಲಿನಿಂದ ಸುದೀರ್ಘ ಯಾತ್ರೆ ಮಾಡಿರುವುದರಿಂದ ಉಲ್ಬಣಿಸಿರುವ ಗಾಯಗಳಿವು ಎಂದು ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಅಮರ್ ಸಿಂಗ್ ವಿವರಿಸಿದರು.
ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಎರಡು ಹಂತದ ಯಾತ್ರೆಯಲ್ಲಿ ನಾನು ಭಾರೀ ದೂರವನ್ನು ನಡೆದುಕೊಂಡೇ ಸಾಗಿದ್ದರಿಂದ ನನ್ನ ಎಡಗಾಲಿನಲ್ಲಿ ಗಾಯಗಳಾಗಿವೆ. ನಾನು ಸುಳ್ಳು ಹೇಳುತ್ತಿಲ್ಲ, ಎಷ್ಟೊಂದು ಪ್ರಮಾಣ ಗಾಯಗಳಾಗಿವೆ ಎಂಬುದನ್ನು ನೀವೇ ನೋಡಿ. ಈ ಹಿಂದೆ ಸರ್ಜರಿ ಮಾಡಿಸಿಕೊಂಡಿದ್ದವನು ನಾನು. ಅಲ್ಲಿ ರಕ್ತ ಈಗಲೂ ಜಿಣುಗುತ್ತಿರುವುದನ್ನು ನೋಡಿ ಎಂದರು.