ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೂರಾರು ಮೀನುಗಾರರ ಸೆರೆ; ಮುಂದುವರಿದ ಲಂಕಾ ದೌರ್ಜನ್ಯ (Indian fishermen | Sri Lanka | Tamil Nadu | Manmohan Singh)
ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಸವಾಲು ಹಾಕುವ ರೀತಿಯಲ್ಲಿ ಶ್ರೀಲಂಕಾ ಇತ್ತೀಚಿನ ದಿನಗಳಲ್ಲಿ ವರ್ತಿಸುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಯಾವುದೇ ಗಂಭೀರ ಕ್ರಮಕ್ಕೆ ಮುಂದಾಗದೇ ಇರುವುದನ್ನು 'ದೌರ್ಬಲ್ಯ' ಎಂದೇ ಪರಿಗಣಿಸಿರುವ ದ್ವೀಪರಾಷ್ಟ್ರ ಇದೀಗ ಭಾರತದ 106 ಮಂದಿ ಮೀನುಗಾರರನ್ನು ಬಂಧಿಸಿದೆ.

ಆಳ ಸಮುದ್ರ ಮೀನುಗಾರಿಕೆಂದು ತಮಿಳುನಾಡಿನ ಪ್ರತ್ಯೇಕ ಮೂರು ಕಡೆಗಳಿಂದ 18 ಮೀನುಗಾರಿಕಾ ದೋಣಿಗಳಲ್ಲಿ 106 ಮೀನುಗಾರರು ಫೆಬ್ರವರಿ 12ರಂದು ತೆರಳಿದ್ದರು. ಆದರೆ ಅವರು ವಾಪಸ್ ಬಂದಿಲ್ಲ, ಕಾಣೆಯಾಗಿದ್ದಾರೆ.

ಶ್ರೀಲಂಕಾ ವರದಿಗಳ ಪ್ರಕಾರ, ಈ ಮೀನುಗಾರರನ್ನು ಫೆಬ್ರವರಿ 15ರಂದು ಕೊಡೈಕರೈ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಶ್ರೀಲಂಕಾ ಮೀನುಗಾರರ ತಂಡವೊಂದು ಅಪಹರಿಸಿದೆ.

ವಶಕ್ಕೆ ತೆಗೆದುಕೊಂಡ ಭಾರತೀಯ ಮೀನುಗಾರರನ್ನು ಶ್ರೀಲಂಕಾದ ಜಾಫ್ನಾ ಜಿಲ್ಲೆಯ ವಡಮರಾಚಿಗೆ ಕರೆದೊಯ್ದು, ನಂತರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಮೀನುಗಾರರನ್ನು ಶ್ರೀಲಂಕಾ ಸರಕಾರದ ವಶಕ್ಕೆ ಒಪ್ಪಿಸಿರುವುದನ್ನು ತಮಿಳುನಾಡಿನ ಮೀನುಗಾರ ಸಂಘಟನೆಗಳು ಕೂಡ ಖಚಿತಪಡಿಸಿವೆ.

ಭಾರತೀಯ ಮೀನುಗಾರರನ್ನು ಶ್ರೀಲಂಕಾವು ಬಂಧಿಸಿರುವುದರಿಂದ ಮೀನುಗಾರರ ಕುಟುಂಬಗಳು ನೆಲೆಸಿರುವ ನಾಗಪಟ್ಟಿಣಂ ಜಿಲ್ಲೆಯ ಅಕ್ಕರೈಪೇಟೈ, ಕೀಚಾಕುಪ್ಪಂ, ಕರೈಕಾಲ್ ಜಿಲ್ಲೆಯ ಸೇರುತ್ತೂರ್ ಪ್ರದೇಶಗಳಲ್ಲಿ ಉದ್ವಿಗ್ನತೆ ನೆಲೆಸಿದೆ. ಹಲವು ರಾಜಕೀಯ ಪಕ್ಷಗಳು ಮೀನುಗಾರರ ಬಿಡುಗಡೆಗೆ ಆಗ್ರಹಿಸುತ್ತಿವೆ.

ಸ್ವತಃ ಆಡಳಿತ ಪಕ್ಷ ಡಿಎಂಕೆ ಕೂಡ ಪ್ರತಿಭಟನೆ ನಡೆಸುತ್ತಿದೆ. ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರಿ ಹಾಗೂ ಸಂಸದೆ ಕನಿಮೋಳಿ ನೇತೃತ್ವದಲ್ಲಿ ಚೆನ್ನೈಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಕೂಡ ಮೀನುಗಾರರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಚೆನ್ನೈಯಲ್ಲಿನ ಶ್ರೀಲಂಕಾ ರಾಯಭಾರ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಡಿಎಂಕೆ ಹಾಕಿದೆ.

ಘಟನೆಯನ್ನು ಖಂಡಿಸಿರುವ ನಾಗಪಟ್ಟಿಣಂ ಜಿಲ್ಲೆಯ ಮೀನುಗಾರರು, ಮೀನುಗಾರಿಕೆಯನ್ನು ಬಹಿಷ್ಕರಿಸಿದ್ದಾರೆ. ಅವರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಮೀನುಗಾರರ ಮೇಲೆ ದೌರ್ಜನ್ಯ ನಡೆಸುತ್ತಾ ಬಂದಿರುವ ಶ್ರೀಲಂಕಾ ಸೇನೆ ಮತ್ತು ಪೊಲೀಸರ ಬಗ್ಗೆ ಆ ದೇಶದ ಜತೆ ಮಾತುಕತೆ ನಡೆಸುವಂತೆ ಒತ್ತಾಯಿಸುತ್ತಿದ್ದರೂ, ಕೇಂದ್ರ ಸರಕಾರವು ಗಂಭೀರವಾಗಿ ಇದನ್ನು ಪರಿಗಣಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.

ಈ ಕುರಿತ ಪ್ರಶ್ನೆಯೊಂದಕ್ಕೆ ಇಂದು ಉತ್ತರಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಭಾರತೀಯ ಮೀನುಗಾರರ ಅಪಹರಣ ವಿಚಾರ ತಿಳಿದಿದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು. ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳ ಜತೆಗಿನ ಸಂವಾದದಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ.
ಇವನ್ನೂ ಓದಿ