ಗೋದ್ರಾ ರೈಲು ದುರಂತ ಪ್ರಕರಣದಲ್ಲಿ ಬಲಿಪಶುಗಳನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದ ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ತಥಾಕಥಿತ ಜಾತ್ಯತೀತತೆ ಬಟಾ ಬಯಲಾಗಿದೆ ಎಂದು ಗೋದ್ರಾ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ ಪ್ರತಿಕ್ರಿಯಿಸಿದೆ.
2002ರಲ್ಲಿ ಸಂಭವಿಸಿದ್ದ ರೈಲು ದುರಂತ ಒಂದು ಪಿತೂರಿ ಎಂದು ಹೇಳಿರುವ ಸಾಬರಮತಿ ವಿಶೇಷ ನ್ಯಾಯಾಲಯವು, 31 ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿದೆ. 63 ಮಂದಿಯನ್ನು ಖುಲಾಸೆಗೊಳಿಸಿದೆ.
ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಯುಪಿಎ ಸರಕಾರದ ದುರ್ಮಾರ್ಗವು ಇದರೊಂದಿಗೆ ಬಹಿರಂಗಗೊಂಡಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾನೂನು ಮತ್ತು ನ್ಯಾಯಕ್ಕೆ ಯಾವತ್ತೂ ಜಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆಗೆ ಇಂಬು ದೊರೆತಿದೆ; ಪ್ರಕರಣವನ್ನು ನಿರ್ಲಕ್ಷಿಸಲು ಹಲವು ಶಕ್ತಿಗಳು ಯತ್ನಿಸಿದ್ದವು. ಹಲವು ರಾಜಕಾರಣಿಗಳು ಇದರ ಹಿಂದಿದ್ದರು ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
PR
ರೈಲಿನ ಎಸ್6 ಬೋಗಿಯ ಒಳಗಡೆಯೇ ಬೆಂಕಿ ಹುಟ್ಟಿಕೊಂಡಿತ್ತು ಎಂದು ವರದಿ ನೀಡಿದ್ದ ನ್ಯಾಯಮೂರ್ತಿ ಯುಸಿ ಬ್ಯಾನರ್ಜಿ ಸಮಿತಿಯನ್ನು ಪ್ರಸಾದ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್ ಈ ಸಮಿತಿಯನ್ನು ರಚನೆ ಮಾಡಿದ್ದರು.
'ಬ್ಯಾನರ್ಜಿ ಆಯೋಗದ ವರದಿಯನ್ನು ನೀವು ನೆನಪು ಮಾಡಿಕೊಳ್ಳಿ. ಗೋದ್ರಾ ದುರಂತ ಒಂದು ಆಕಸ್ಮಿಕ ಘಟನೆ, ಇದು ಹೊರಗಿನಿಂದ ನಡೆದ ಘಟನೆಯಲ್ಲ. ರೈಲು ಬೋಗಿಯ ಒಳಗಡೆಯೇ ಬೆಂಕಿ ಹುಟ್ಟಿಕೊಂಡಿತ್ತು ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರು ವರದಿ ನೀಡಿದ್ದರು. 2005ರ ಚುನಾವಣೆ ಸಂದರ್ಭದಲ್ಲಿ ಬಂದ ಸುಳ್ಳು ವರದಿಯಾಗಿತ್ತದು' ಎಂದು ಸಂಸತ್ತಿನ ಹೊರಗಡೆ ಮಾತನಾಡುತ್ತಾ ಬಿಜೆಪಿ ನಾಯಕ ವರದಿಯ ಅಂಶ ಉಲ್ಲೇಖಿಸಿದರು.
ಗೋದ್ರಾ ತೀರ್ಪಿಗೆ ಬಿಜೆಪಿ ವಕ್ತಾರ ತರುಣ್ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದುರಂತವನ್ನು ಮುಚ್ಚಿ ಹಾಕಲು ಯತ್ನಿಸಿದ ಯುಪಿಎ ಸರಕಾರದ ದುರ್ಮಾರ್ಗಗಳು ಇದರೊಂದಿಗೆ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ವತಃ ಬಲಿಪಶುಗಳ ಮೇಲೆಯೇ ಆರೋಪಗಳನ್ನು ಹೊರಿಸಲು ಯುಪಿಎ ಸರಕಾರ ಯತ್ನಿಸಿತ್ತು. ಆದರೆ ನ್ಯಾಯಾಲಯವು ದುಷ್ಕರ್ಮಿಗಳಿಗೆ ಶಿಕ್ಷೆ ನೀಡಲು ಮುಂದಾಗಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಒಬ್ಬ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ನಕಲಿ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದ ತಥಾಕಥಿತ ಜಾತ್ಯತೀತವಾದಿಗಳಾದ ಲಾಲೂ ಪ್ರಸಾದ್ ಮತ್ತು ಯುಪಿಎ ಸರಕಾರವು, ಬಲಿಪಶುಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿತ್ತು ಎಂದು ಆರೋಪಿಸಿದರು.