ಗೋದ್ರಾ ರೈಲು ದುರಂತ ಪ್ರಕರಣದ ಕುರಿತ ವಿಶೇಷ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಿರಾಕರಿಸಿದೆ. ತೀರ್ಪನ್ನು ಸಂಪೂರ್ಣವಾಗಿ ಅಧ್ಯಯನ ನಡೆಸದೆ ಏನೂ ಹೇಳುವುದಿಲ್ಲ ಎಂದಿದೆ. ಆದರೆ ಗುಜರಾತ್ ಗಲಭೆಗಳಿಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಕಾರಣ ಎಂದು ತನ್ನ ಆರೋಪವನ್ನು ಪುನರುಚ್ಛರಿಸಿದೆ.
ತೀರ್ಪಿನಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದರ ಪೂರ್ಣ ಮಾಹಿತಿ ನಮಗಿಲ್ಲ. ಹಾಗಾಗಿ ಈಗಲೇ ಏನೂ ಹೇಳಲಾಗದು ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
ಆದರೆ, ರೈಲು ದುರಂತದ ಬಳಿಕ ನಡೆದ ಕೋಮು ಗಲಭೆಯು ಪ್ರಜಾಪ್ರಭುತ್ವಕ್ಕೆ ಆದ ದೊಡ್ಡ ನಷ್ಟ ಎಂದರು.
ಗೋದ್ರಾ ಘಟನೆಯ ಕುರಿತ ತೀರ್ಪು ಏನೇ ಆಗಿರಲಿ, ಆದರೆ ಅದರ ಬಳಿಕ ಗುಜರಾತಿನಲ್ಲಿ ನಡೆದ ಕೋಮು ಗಲಭೆಗಳು ಪ್ರಜಾಪ್ರಭುತ್ವದಲ್ಲಿ ಕಲೆಯಾಗಿಯೇ ಉಳಿದುಕೊಂಡಿದೆ. ಇದು ನರೇಂದ್ರ ಮೋದಿಯವರಿಗೆ ಅಂಟಿರುವ ಕಳಂಕ. ದೇಶದ ಜನತೆಗೆ ಉತ್ತರಿಸುವ ಹೊಣೆಗಾರಿಕೆ ಅವರ ಮೇಲಿದೆ. ಅಂದು ನಡೆದ ಗಲಭೆಗಳಿಗೆ ಮೋದಿಯೇ ಜವಾಬ್ದಾರ ಎಂದು ನಟರಾಜನ್ ಆರೋಪಿಸಿದರು.
ರೈಲಿಗೆ ಹೊರಗಿನಿಂದಲೇ ಬೆಂಕಿ ಹಚ್ಚಲಾಗಿತ್ತು ಎಂಬ ನಮ್ಮ ನಿಲುವಿಗೆ ತೀರ್ಪಿನಿಂದ ಪುಷ್ಠಿ ದೊರೆತಿದೆ ಎಂಬ ಬಿಜೆಪಿಯ ವಾದಕ್ಕೆ ಪ್ರತಿಕ್ರಿಯಿಸಿರುವ ಅವರು, ರೈಲು ದುರ್ಘಟನೆಯ ಬಳಿಕ ಅಲ್ಲಿ ನಡೆದ ಹಿಂಸಾಚಾರಗಳಿಗೆ ಮೋದಿ ಮತ್ತು ಅವರ ಸರಕಾರವೇ ನೇರ ಹೊಣೆ ಎಂಬ ವಾಸ್ತವವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ನುಣುಚಿಕೊಂಡರು.
ತೀರ್ಪನ್ನು ಕಾಂಗ್ರೆಸ್ ಒಪ್ಪುತ್ತಿಲ್ಲ ಎಂಬುದನ್ನು ನೇರವಾಗಿ ಹೇಳಿಲ್ಲವಾದರೂ, ಅವರ ಮಾತುಗಳಲ್ಲಿ ಅದು ವ್ಯಕ್ತವಾಯಿತು. 'ತೀರ್ಪು ಏನೇ ಹೇಳಿದ್ದರೂ, ಇದು ಮೊದಲ ಹಂತದ ನ್ಯಾಯಾಲಯ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಇನ್ನೂ ಹಲವು ನ್ಯಾಯಾಲಯಗಳಿವೆ. ತೊಂದರೆಯಾಗಿರುವ ಅರ್ಜಿದಾರರಿಗೆ ಇನ್ನಷ್ಟು ಅವಕಾಶಗಳಿವೆ ಎಂದಷ್ಟೇ ಹೇಳಬಲ್ಲೆ' ಎಂದರು.
ತಪ್ಪಿಸಿಕೊಳ್ಳುತ್ತಿರುವ ಕೇಂದ್ರ.. ವಿಶೇಷ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಲು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಕೂಡ ನಿರಾಕರಿಸಿದ್ದಾರೆ. ಬಹುತೇಕ ಸಚಿವರುಗಳು ಇದೇ ನೀತಿಯನ್ನು ಅನುಸರಿಸುತ್ತಿದ್ದಾರೆ.
ನ್ಯಾಯಾಲಯವು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಅಲ್ಲಿ ಸಾಕಷ್ಟು ಪ್ರಕ್ರಿಯೆಗಳಿವೆ. ಕಾನೂನಿನ ಹಾದಿಗೆ ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಇದರ ವಿರುದ್ಧ ಖಂಡಿತವಾಗಿಯೂ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಕೆಯಾಗುತ್ತದೆ. ಹಾಗಾಗಿ ಈಗಲೇ ಪ್ರತಿಕ್ರಿಯೆಗಳನ್ನು ನೀಡುವುದು ಬಾಲಿಶವಾದೀತು ಎಂದು ಮೊಯ್ಲಿ ಹೇಳಿದ್ದಾರೆ.
ಘಟನೆಯ ಹಿಂದಿನ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಅಗತ್ಯವಿದೆ. ಕಾನೂನಿನ ಹಾದಿಯನ್ನು ಯಾರಿಂದಲೂ ತಡೆಯಲಾಗದು ಎಂದರು.
ಗೃಹಸಚಿವ ಪಿ. ಚಿದಂಬರಂ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದರು. ತೀರ್ಪನ್ನು ಅಧ್ಯಯನ ಮಾಡದೆ ಯಾವುದೇ ಹೇಳಿಕೆಗಳನ್ನು ನಾನು ನೀಡುವುದಿಲ್ಲ ಎಂದು ತಿಳಿಸಿದರು.
ತೀರ್ಪಿನ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ. ಕಾರಣಗಳನ್ನು ಅರ್ಥ ಮಾಡಿಕೊಳ್ಳದೆ ತೀರ್ಪು ಸರಿ ಅಥವಾ ತಪ್ಪು ಎಂದು ನಾವು ಹೇಗೆ ಹೇಳಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.