ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಮುಸ್ಲಿಂ ಎಂದು ಗಲ್ಲಿಗೆ ಹಾಕುತ್ತಿಲ್ಲವೇ?: ಜೋಷಿ ಪ್ರಶ್ನೆ (BJP | Afzal Guru | P Chidambaram | Mercy petitions)
ಸರ್ವೋಚ್ಚ ನ್ಯಾಯಾಲಯ ಮರಣ ದಂಡನೆ ವಿಧಿಸಿರುವ ವ್ಯಕ್ತಿಗಳ ಕ್ಷಮಾದಾನ ಅರ್ಜಿಗಳ ಇತ್ಯರ್ಥಕ್ಕೆ ಯಾವುದೇ ಕಾಲಮಿತಿಯಿಲ್ಲ. ಎಲ್ಲಾ ಅರ್ಜಿಗಳು ಸರದಿ ಪ್ರಕಾರವಾಗಿಯೇ ಸಾಗುತ್ತವೆ ಎಂದು ರಾಜ್ಯಸಭೆಯಲ್ಲಿ ಗೃಹಸಚಿವ ಪಿ. ಚಿದಂಬರಂ ಹೇಳಿಕೆ ನೀಡಿದ್ದಕ್ಕೆ, ಅಫ್ಜಲ್ ಗುರು ಮುಸ್ಲಿಮನಾಗಿರುವುದಕ್ಕೆ ಹೀಗೆ ಮಾಡಲಾಗುತ್ತಿದೆಯೇ ಎಂದು ಶಿವಸೇನೆ ಸಂಸದ ಮುರಳಿ ಮನೋಹರ ಜೋಷಿ ಪ್ರಶ್ನಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಚಿದಂಬರಂ, ಕ್ಷಮಾದಾನ ಅರ್ಜಿಗಳ ಮೇಲಿನ ರಾಷ್ಟ್ರಪತಿ ನಿರ್ಧಾರದ ಬಗ್ಗೆ ಕೇಂದ್ರ ಸರಕಾರದ ಸಲಹೆ ಒಪ್ಪವಂತದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ನಿಯಮಾವಳಿಗಳನ್ನು ಬದಲಾವಣೆ ಮಾಡಲು ನಮಗೆ ಕಾರಣಗಳೇ ಸಿಗುತ್ತಿಲ್ಲ ಎಂದರು.

ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡಲು ರಾಷ್ಟ್ರಪತಿಗಳಿಗೆ ಕಾಲಮಿತಿಯಿಲ್ಲ. ಈ ಅಧಿಕಾರವನ್ನು ಉನ್ನತ ಸಾಂವಿಧಾನಿಕ ಸ್ಥಾನದಲ್ಲಿರುವ ರಾಷ್ಟ್ರಪತಿಯವರು ಚಲಾಯಿಸುತ್ತಾರೆ. ಅವರಿಗೆ ಈ ಕುರಿತು ಕಾಲಮಿತಿ ನಿಗದಿ ಮಾಡುವುದು ಸೂಕ್ತವೆನಿಸುವುದಿಲ್ಲ ಎಂದು ಗೃಹಸಚಿವರು ತಿಳಿಸಿದರು.

2008ರಿಂದ ಕ್ಷಮಾದಾನ ಅರ್ಜಿಗಳ ನಿರ್ಧಾರ ಕುರಿತ ನನ್ನ ಪ್ರಸ್ತಾವನೆಗಳು ಫಲಪ್ರದವಾಗುತ್ತಿರುವುದರಿಂದ, ಕಾಲಮಿತಿಯನ್ನು ನಿಗದಿಪಡಿಸಲು ನನಗೆ ಯಾವುದೇ ಕಾರಣಗಳು ಸಿಗುತ್ತಿಲ್ಲ ಎಂದು ನುಡಿದರು.

ಸಂಸತ್ ದಾಳಿ ಪ್ರಕರಣದಲ್ಲಿ ಮರಣ ದಂಡನೆ ಪಡೆದುಕೊಂಡಿರುವ ಭಯೋತ್ಪಾದಕ ಅಫ್ಜಲ್ ಗುರು ಮುಸ್ಲಿಮನಾಗಿರುವ ಕಾರಣದಿಂದ ಮರಣ ದಂಡನೆಯನ್ನು ವಿಳಂಬ ಮಾಡಲಾಗುತ್ತಿದೆ ಎಂಬ ಶಿವಸೇನೆ ಸಂಸದ ಮುರಳಿ ಮನೋಹರ ಜೋಷಿಯವರ ಆರೋಪಕ್ಕೆ ಆಡಳಿತ ಮತ್ತು ಎಡಪಕ್ಷಗಳ ಸದಸ್ಯರಿಂದ ತೀಕ್ಷ್ಮ ಪ್ರತಿಕ್ರಿಯೆಗಳು ಬಂದವು.

ಜೋಷಿಯವರ ಆರೋಪವನ್ನು ತೀವ್ರವಾಗಿ ಖಂಡಿಸಿದ ಚಿದಂಬರಂ, ಅವರು ಮಾಡಿರುವ ಆರೋಪ ಅಸಂಸದೀಯವಾದದ್ದು ಮತ್ತು ಅನಗತ್ಯವಾದದ್ದು ಎಂದರು.

ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿರುವ ದಿನಾಂಕ ಮತ್ತು ಕ್ಷಮಾದಾನ ಅರ್ಜಿಗಳನ್ನು ಸ್ವೀಕರಿಸಿದ ದಿನಾಂಕಗಳ ಆಧಾರದಲ್ಲಿ ಸರದಿಯ ಪ್ರಕಾರ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲಾಗುತ್ತದೆ.

ಇದುವರೆಗೆ 13 ಪ್ರಕರಣಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಏಳು ಪ್ರಕರಣಗಳ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಅಫ್ಜಲ್ ಗುರುವಿಗಿಂತಲೂ ಮೊದಲು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಮೂವರು ದೋಷಿಗಳ ಪ್ರಕರಣಗಳು ಸೇರಿವೆ. ಇತರ ಎರಡು ಪ್ರಕರಣಗಳು ಅಫ್ಜಲ್ ಪ್ರಕರಣಕ್ಕಿಂತ ಮುಂದಿವೆ. ಅಫ್ಜಲ್ ಗುರು ಕ್ಷಮಾದಾನ ಅರ್ಜಿಯನ್ನು ಇನ್ನೂ ರಾಷ್ಟ್ರಪತಿಯವರಿಗೆ ಕಳುಹಿಸಿಲ್ಲ. ಸರದಿ ಬಂದಾಗ ಕಳುಹಿಸಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು.

ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಗಳನ್ನು ಕಳುಹಿಸುವಾಗ ತಪ್ಪಿತಸ್ಥನಾದ ವ್ಯಕ್ತಿಯ ಧರ್ಮ, ಜಾತಿ ಅಥವಾ ಬಣ್ಣವನ್ನು ನಾನು ನೋಡುವುದಿಲ್ಲ. ಯಾವುದೇ ಭೀತಿಯಿಲ್ಲ, ಯಾರ ಪರವಾಗಿಯೂ ನಿಲ್ಲದೆ, ಪೂರ್ವಗ್ರಹವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಮುಂದೆಯೂ ತೆಗೆದುಕೊಳ್ಳಲಾಗುತ್ತದೆ ಎಂದರು.
ಇವನ್ನೂ ಓದಿ