ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ನೇಮಕ ಅಸಿಂಧು: ಕೇಂದ್ರಕ್ಕೆ ಸುಪ್ರೀಂ ಛೀಮಾರಿ (CVC | PJ Thomas | Supreme Court | UPA | CVC Appointment | Palmolein Import Scam)
ನವದೆಹಲಿ: ಹಗರಣಗಳು, ನೇಮಕಾತಿಗಳು ಮತ್ತು ಇನ್ನೂ ಹಲವು ನಿರ್ಧಾರಗಳಿಗಾಗಿ ಸತತವಾಗಿ ಸುಪ್ರೀಂಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಗುರುವಾರ ಮತ್ತೊಂದು ತಪರಾಕಿ. 2010ರ ಸೆಪ್ಟೆಂಬರ್ 3ರಂದು ಹೊರಡಿಸಲಾದ, ಕೇಂದ್ರ ಜಾಗೃತ ದಳ ಆಯುಕ್ತ (ಸಿವಿಸಿ) ಪಿ.ಜೆ.ಥಾಮಸ್ ನೇಮಕಾತಿ ಆದೇಶವೇ ಅಸಿಂಧು ಮತ್ತು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿದೆ.

ಭ್ರಷ್ಟಾಚಾರ ವಿರುದ್ಧ ಹೋರಾಡುವ ಜಾಗೃತ ದಳಕ್ಕೆ ಕೇರಳದ ಪಾಮೋಲಿನ್ ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಂಕಿತರಾಗಿದ್ದ ಮತ್ತು ಚಾರ್ಜ್ ಶೀಟ್ ದಾಖಲು ಮಾಡಲ್ಪಟ್ಟಿರುವ ಥಾಮಸ್ ಅವರನ್ನು ನೇಮಿಸಿರುವುದಿಂದ ಕೇಂದ್ರ ಸರಕಾರಕ್ಕೆ ಇದೀಗ ದೊಡ್ಡ ಹೊಡೆತ ತಿಂದಿದೆ.

ಇದಲ್ಲದೆ, ಭವಿಷ್ಯದಲ್ಲಿ ಇಂತಹಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆಯೂ ಸುಪ್ರೀಂ ಕೋರ್ಟು ಆದೇಶಿಸಿದೆ. ನ್ಯಾಯಾಲಯವು ತೀಕ್ಷ್ಣ ಶಬ್ದಗಳಲ್ಲಿ ಕೇಂದ್ರದ ಈ ನೇಮಕಾತಿ ನಿರ್ಧಾರವನ್ನು ಟೀಕಿಸಿರುವುದರಿಂದ ಮತ್ತು ಈ ನೇಮಕಾತಿ ಸಮಿತಿಯ ನೇತೃತ್ವವನ್ನು ಸ್ವತಃ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೇ ವಹಿಸಿರುವುದರಿಂದ, ಯುಪಿಎ ಸರಕಾರದ ಮೇಲೆ ಮುಗಿಬೀಳಲು ಬಿಜೆಪಿಗೆ ಹೆಬ್ಬಾಗಿಲು ತೆರೆದಿಟ್ಟಂತಾಗಿದೆ.

ಮೊದಲು ಈ ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಪ್ರತಿಪಕ್ಷಗಳು. ಬಳಿಕವೂ ಸುಪ್ರೀಂ ಕೋರ್ಟು, ಥಾಮಸ್ ಅವರು ಮಾತ್ರವೇ ಈ ಹುದ್ದೆಗೆ ಸಮರ್ಥರೇ ಎಂದು ಹಿಂದೆಯೇ ಯುಪಿಎ ಸರಕಾರವನ್ನು ಪ್ರಶ್ನಿಸಿತ್ತು.

ಕೇಂದ್ರ ಜಾಗೃತ ಆಯುಕ್ತರನ್ನಾಗಿ ನೇಮಕ ಮಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಪಿ.ಜೆ. ಥಾಮಸ್ ಕಳಂಕಿತರು, ಅವರ ಮೇಲೆ ಆರೋಪ ಪಟ್ಟಿ ದಾಖಲಾಗಿ, ಕ್ರಮಕ್ಕೆ ಕೇರಳ ಸರಕಾರವು ಅನುಮತಿ ನೀಡಿತ್ತು ಎಂಬುದೇ ತಿಳಿದಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರವು ಇತ್ತೀಚೆಗೆ ತಿಳಿಸಿದಾಗ ಇದನ್ನು ತೀವ್ರವಾಗಿ ಪ್ರತಿಭಟಿಸಿದ್ದವರು ಅದೇ ಸಮಿತಿಯ ಮತ್ತೊಬ್ಬ ಸದಸ್ಯೆಯಾಗಿದ್ದ ಪ್ರತಿಪಕ್ಷ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್.

ಸರಕಾರವು ಸುಳ್ಳು ಹೇಳುತ್ತಿದೆ. ಸಿವಿಸಿ ಮೇಲೆ ಆರೋಪಪಟ್ಟಿ ಸಲ್ಲಿಕೆಯಾಗಿದ್ದುದು ಸರಕಾರಕ್ಕೆ ಗೊತ್ತಿತ್ತು. ಥಾಮಸ್ ಅವರನ್ನು ಸಿವಿಸಿಯಂತಹ ತನಿಖಾ ಸಂಸ್ಥೆಗೆ ನೇಮಕ ಮಾಡುವುದು ಬೇಡ ಎಂದು ಅಂದಿನ ಸಮಿತಿ ಸಭೆಯಲ್ಲಿಯೇ ಚರ್ಚೆಯಾಗಿತ್ತು ಎಂದು ಸುಷ್ಮಾ ಹೇಳಿದ ಮರುದಿನ. ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಕೊನೆಗೂ ಮೆತ್ತಗಾಗಿ, ಹೌದು, ಸುಷ್ಮಾ ಹೇಳಿದ್ದು ಸರಿ. ಈ ಬಗ್ಗೆ ಚರ್ಚೆಯಾಗಿತ್ತು ಎಂದು ಹೇಳಿಕೆ ನೀಡಿದ ನಂತರ ಸುಷ್ಮಾ ಸ್ವರಾಜ್ ಸುಮ್ಮನಾಗಿದ್ದರಾದರೂ, ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿಗೇ ಸುಳ್ಳು ಹೇಳಿದ್ದು ಮಾತ್ರ ಮರೆಯಲಾಗದ ಅನುಭವವಾಯಿತು.

ಬಿಜೆಪಿಗೆ ಯಾವುದೂ ಸರಿಯಾಗುತ್ತಿಲ್ಲ ಎಂದಿದ್ದ ಕಾಂಗ್ರೆಸ್...
ಅದು ಸಿಬಿಐ (ಕೇಂದ್ರೀಯ ತನಿಖಾ ದಳ) ಆಗಿರಬಹುದು ಅಥವಾ ಸಿವಿಸಿ (ಕೇಂದ್ರ ಜಾಗೃತ ದಳ) ಇರಬಹುದು, ಬಿಜೆಪಿಯು ದೇಶದ ಎಲ್ಲಾ ಸಂಸ್ಥೆಗಳಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ. ಸಿವಿಸಿ ಆಯುಕ್ತರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಪಕ್ಷದ ನಾಯಕಿ ಮುಂದೊಡ್ಡಿರುವ ಕಾರಣಗಳು ನಿರಾಧಾರ. ಆದರೆ ಪ್ರತಿಯೊಂದು ವಿಚಾರಗಳಲ್ಲೂ ರಾಜಕೀಯ ಬೇಳೆ ಬೇಯಿಸಬೇಕೆಂದು ಹೊರಟಿದ್ದರೆ, ಯಾರು ತಾನೇ ಅದನ್ನು ತಡೆಯಲು ಸಾಧ್ಯವಿದೆ? ಬಿಜೆಪಿಗಂತೂ ಯಾವುದೂ ಸರಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹಿಂದೆ ಆಕ್ರೋಶದಿಂದ ಹೇಳಿಕೆ ನೀಡಿದ್ದರು.

90ರ ದಶಕದಲ್ಲಿ ಕೇರಳದ ಆಹಾರ ವಿಭಾಗದ ಕಾರ್ಯದರ್ಶಿಯಾಗಿದ್ದಾಗ ಮಲೇಷ್ಯಾದಿಂದ ಪಾಮೋಲಿನ್ ಎಣ್ಣೆ ಆಮದು ಭ್ರಷ್ಟಾಚಾರ ಪ್ರಕರಣದಲ್ಲಿ ಥಾಮಸ್ ಅವರ ಮೇಲೆ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಥಾಮಸ್ ಅವರು ಪಾಮೋಲಿನ್ ಎಣ್ಣೆ ಆಮದಿಗಾಗಿ ಭಾರೀ ಹೋರಾಟ ಮಾಡಿದ್ದರು. ಮತ್ತು ಇದನ್ನು ಭಾರೀ ಬೆಲೆ ಕೊಟ್ಟು ತರಿಸಿಕೊಳ್ಳಲಾಗಿತ್ತು.

ಈಗಾಗಲೇ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿರುವ ಕೇಂದ್ರ ಸರಕಾರಕ್ಕೆ 2ಜಿ ಹಗರಣ ಅತಿದೊಡ್ಡ ಭೂತವಾಗಿ ಕಾಡುತ್ತಿದೆ. ಸಿವಿಸಿ ಆಗಿ ನೇಮಕಗೊಳ್ಳುವವರೆಗೂ ಟೆಲಿಕಾಂ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಥಾಮಸ್ ಅವರೇ ಇದೀಗ 2ಜಿ ಹಗರಣದ ತನಿಖೆಯ ಮೇಲ್ವಿಚಾರಣೆ ನಡೆಸುವ ಪರಿಸ್ಥಿತಿ ಬಂದಿರುವುದರಿಂದ, ತನಿಖೆ ಎಲ್ಲಿಗೆ ತಲುಪಬಹುದು ಎಂಬುದು ತನಿಖೆಯ ಉಸ್ತುವಾರಿ ವಹಿಸಿರುವ ಸುಪ್ರೀಂ ಕೋರ್ಟಿನ ಆತಂಕವಾಗಿತ್ತು.
ಇವನ್ನೂ ಓದಿ