ಲಷ್ಕರ್ ವಿಭಜನೆ ತಪ್ಪಿಸಲು ಭಾರತ ದಾಳಿಗೆ ಐಎಸ್ಐ ಪ್ಲ್ಯಾನ್?
ನವದೆಹಲಿ, ಮಂಗಳವಾರ, 15 ಮಾರ್ಚ್ 2011( 11:29 IST )
ಜಾಗತಿಕ ಮಟ್ಟಕ್ಕೆ ಭಯೋತ್ಪಾದನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಾ ಬಂದಿರುವ ಲಷ್ಕರ್ ಇ ತೋಯ್ಬಾದೊಳಗಿನ ಭಿನ್ನಮತೀಯರ ಬಾಯ್ಮುಚ್ಚಿಸುವ ಸಲುವಾಗಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತೆ ಭಾರತದ ಮೇಲೆ ಮುಂಬೈ ರೀತಿಯ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು ವರದಿಗಳು ಹೇಳಿವೆ.
ಭಾರತವನ್ನು ಪರೋಕ್ಷವಾಗಿ ಕಟ್ಟಿ ಹಾಕಲು ಭಯೋತ್ಪಾದನೆಯನ್ನು ಅಸ್ತ್ರ ಮಾಡಿಕೊಂಡು ಬಂದಿರುವ ಪಾಕಿಸ್ತಾನದ ಐಎಸ್ಐಗೆ ಲಷ್ಕರ್ ಇ ತೋಯ್ಬಾ ವಿಭಜನೆಯಾಗುವುದು ಬೇಕಿಲ್ಲ. ಅಲ್ಲದೆ, ಅದು ಭಾರತವನ್ನು ಬಿಟ್ಟು ಇತರ ರಾಷ್ಟ್ರಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವುದು ಕೂಡ ಅಪಥ್ಯ. ಅದೇ ಕಾರಣದಿಂದ ಭಾರತದ ಮೇಲೆ ಇನ್ನೊಂದು ದಾಳಿ ನಡೆಸುವ ಯೋಜನೆಯನ್ನು ಹಾಕಿಕೊಂಡಿದೆ. ಆ ಮೂಲಕ ಭಿನ್ನಮತೀಯರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಚಿಂತನೆ ಐಎಸ್ಐನದ್ದು ಎಂದು ಹೇಳಲಾಗಿದೆ.
ಇದು ಭಾರತೀಯ ಬೇಹುಗಾರಿಕಾ ಇಲಾಖೆಗೆ ಭಾರೀ ತಲೆನೋವಿಗೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ಹಲವು ಐಎಸ್ಐ ಏಜೆಂಟರನ್ನು ಗುಪ್ತಚರ ದಳಗಳು ಸೆರೆ ಹಿಡಿದಿವೆ. ಈ ಬಾರಿ ಹಿಂದೆಂದಿಗಿಂತ ದೊಡ್ಡ ಮಟ್ಟದ ದಾಳಿಯನ್ನು ನಡೆಸಲು ಲಷ್ಕರ್ ಸಿದ್ಧತೆ ನಡೆಸಿರುವುದು ಭದ್ರತಾ ಪಡೆಗಳಿಗೂ ಚಿಂತೆಗೆ ಕಾರಣವಾಗಿದೆ.
ಭಾರತಕ್ಕೆ ತಕ್ಷಣ ಬೆದರಿಕೆ ಎದುರಾಗಿರುವುದು ಪ್ರಸಕ್ತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್. ದಾಳಿಯ ಬಗ್ಗೆ ಕೆಲವೊಂದು ನಿರ್ದಿಷ್ಟ ಮಾಹಿತಿಗಳು ಇರುವುದರಿಂದ ರಕ್ಷಣಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಯಾವುದೇ ಅಪಾಯಗಳು ಸಂಭವಿಸದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿವೆ.
ಲಷ್ಕರ್ ಭಾರತವನ್ನು ಬಿಟ್ಟು ಬೇರೆ ದೇಶಗಳ ಮೇಲೆ ದಾಳಿ ನಡೆಸಬಾರದು. ಹಾಗೆ ಮಾಡಿದರೆ ಇತರ ದೇಶಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆಗ ತನ್ನ ಪ್ರಮುಖ ಅಸ್ತ್ರವು ಕೈ ತಪ್ಪಿ ಹೋಗಬಹುದು ಎಂಬ ಭೀತಿಯಲ್ಲಿರುವ ಐಎಸ್ಐ, ಭಾರತದ ಮೇಲಿನ ದಾಳಿಗೆ ಪಣ ತೊಟ್ಟಿದೆ. ಜಾಗತಿಕ ಮಟ್ಟದ ಭಯೋತ್ಪಾದನೆಗೆ ಅಲ್‌ಖೈದಾ ಇದೆ ಎನ್ನುವುದು ಅದರ ಅಭಿಪ್ರಾಯ.
ಜಮ್ಮು-ಕಾಶ್ಮೀರಕ್ಕೆ 'ಸ್ವಾತಂತ್ರ್ಯ' ಒದಗಿಸಬೇಕು ಎಂದು ಹಫೀಜ್ ಮೊಹಮ್ಮದ್ ಸಯೀದ್‌ನಿಂದ 1990ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಲಷ್ಕರ್ ಇ ತೋಯ್ಬಾ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಜಮ್ಮು-ಕಾಶ್ಮೀರ ದಾಳಿಗಳು ಮತ್ತು ಮುಂಬೈ ದಾಳಿ ಅದರ ಇದುವರೆಗಿನ ದೊಡ್ಡ ಮಟ್ಟದ 'ಸಾಧನೆ'.
ಅಮೆರಿಕಾ ದಾಳಿಗೆ ಚಿಂತನೆ... ಈ ಕುರಿತ ಹೆಚ್ಚಿನ ಮಾಹಿತಿ ಭಾರತಕ್ಕೆ ನೀಡಿರುವುದು ಅಮೆರಿಕಾ. ಇದುವರೆಗೆ ಭಾರತವನ್ನೇ ಗುರಿ ಮಾಡಿಕೊಂಡಿದ್ದ ಲಷ್ಕರ್, ಈಗ ಯೂರೋಪ್ ದೇಶಗಳತ್ತಲೂ ಗಮನ ಹರಿಸುತ್ತಿದೆ. ಅಮೆರಿಕಾ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಹೇಳಿತ್ತು.
ಲಷ್ಕರ್ ಒಳಗಿನ ಕೆಲವು ನಾಯಕರು, ತಮ್ಮ ಕಾರ್ಯಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಬೇಕು ಎಂದು ತಮ್ಮ ಉನ್ನತ ನಾಯಕರಿಗೆ ಒತ್ತಡ ಹೇರುತ್ತಾ ಬಂದಿದ್ದಾರೆ. ಈ ರೀತಿಯಾಗಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ. ಆದರೆ ಆ ರೀತಿಯ ಒತ್ತಡಗಳು ಹೆಚ್ಚಾದಾಗಲೆಲ್ಲ ಐಎಸ್ಐ ತಾನೇ ಮುಂದೆ ಬಂದು ಸಮಸ್ಯೆ ಪರಿಹಾರ ಮಾಡಿದೆ.
2008ರ ಮುಂಬೈ ದಾಳಿ ಕೂಡ ಅದೇ ಕಾರಣದಿಂದ ನಡೆದಿತ್ತು. ಅಫಘಾನಿಸ್ತಾನದಲ್ಲಿರುವ ಅಮೆರಿಕಾದ ಸೇನಾ ಪಡೆಗಳ ಮೇಲೆ ದಾಳಿ ನಡೆಸಬೇಕು ಎಂಬ ಲಷ್ಕರ್ ಕೆಳಮಟ್ಟದ ನಾಯಕರ ಒತ್ತಡ ಹೆಚ್ಚಿದಾಗ, ಐಎಸ್ಐ ಮುಂಬೈ ದಾಳಿ ನಡೆಸುವ ಯೋಜನೆಯನ್ನು ಕಾರ್ಯಗತಗೊಳಿಸಿತ್ತು. ಈಗ ಮತ್ತೆ ಅದೇ ನಡೆಯನ್ನು ಅನುಸರಿಸಲು ಹೊರಟಿದೆ ಎಂದು ಶಂಕಿಸಲಾಗಿದೆ.