ಮತ್ತೆ 'ಗೇಮ್ಸ್' ಕಲ್ಮಾಡಿ ವಿಚಾರಣೆ; ಬರ್ಖಾ ದತ್‌ಗೆ ನೊಟೀಸ್
ನವದೆಹಲಿ, ಮಂಗಳವಾರ, 15 ಮಾರ್ಚ್ 2011( 12:15 IST )
ಕಾಮನ್‌ವೆಲ್ತ್ ಗೇಮ್ಸ್ ಹಗರಣ ಕುರಿತಂತೆ ಕಾಂಗ್ರೆಸ್ ಸಂಸದ ಹಾಗೂ ಗೇಮ್ಸ್ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಸಿಬಿಐ ಮತ್ತೆ ವಿಚಾರಣೆ ನಡೆಸುತ್ತಿದೆ. ಈ ನಡುವೆ 2ಜಿ ಹಗರಣ ಕುರಿತಂತೆ ಪತ್ರಕರ್ತರಾದ ಬರ್ಖಾ ದತ್ ಮತ್ತು ವೀರ್ ಸಾಂಘ್ವಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೊಟೀಸ್ ಜಾರಿಗೊಳಿಸಿದೆ.
ಕಾಮನ್‌ವೆಲ್ತ್ ಹಗರಣ ನಡೆದು ವರ್ಷವಾಗಲಿದೆ ಎನ್ನುವ ಹೊತ್ತಿನಲ್ಲಿ ಸಿಬಿಐ ಪ್ರಮುಖ ರೂವಾರಿಯನ್ನು ಎರಡನೇ ಬಾರಿ ವಿಚಾರಣೆ ನಡೆಸಲು ನಿರ್ಧರಿಸಿದೆ. ನವದೆಹಲಿಯಲ್ಲಿನ ಸಿಬಿಐ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ವಿಚಾರಣೆಗೆ ಚಾಲನೆ ನೀಡಲಾಗಿದೆ.
ಇಂದು ಬೆಳಿಗ್ಗೆ ಕಲ್ಮಾಡಿಯವರನ್ನು ವಿಚಾರಣೆಗೊಳಪಡಿಸುವ ಮೊದಲು, ಕಳೆದ ತಿಂಗಳು ಮೊಹರು ಮಾಡಲಾಗಿದ್ದ ಬ್ಯಾಂಕು ಲಾಕರುಗಳನ್ನು ಸಿಬಿಐ ಪರಿಶೀಲನೆ ನಡೆಸಿದೆ. 'ತನಿಖೆಯ ಅಂಗವಾಗಿ ನಾವು ಕಲ್ಮಾಡಿಯವರ ಎರಡು ಬ್ಯಾಂಕ್ ಲಾಕರುಗಳನ್ನು ತೆರೆದಿದ್ದೇವೆ. ಈ ಬಗ್ಗೆ ಇದುವರೆಗೆ ಯಾವುದೇ ವಿವರ ನಮ್ಮಲ್ಲಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲ್ಮಾಡಿ ಪತ್ನಿ ಉಪಸ್ಥಿತಿಯಲ್ಲಿ ಐಸಿಐಸಿಐ ಬ್ಯಾಂಕ್ ಸೇರಿದಂತೆ ಎರಡು ಬ್ಯಾಂಕುಗಳ ಲಾಕರುಗಳನ್ನು ಸಿಬಿಐ ತೆರೆದಿರುವುದನ್ನು ಅಧಿಕಾರಿ ಖಚಿತಪಡಿಸಿದರಾದರೂ, ಖಾತೆ ಹೊಂದಿರುವ ಬ್ಯಾಂಕಿನ ಶಾಖೆಗಳು ಯಾವುವು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.
2010ರ ಡಿಸೆಂಬರಿನಲ್ಲಿ ಕಲ್ಮಾಡಿಯವರ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ನಂತರ ಇದೇ ವರ್ಷದ ಜನವರಿ 5ರಂದು ಮೊದಲ ಬಾರಿ ಕಲ್ಮಾಡಿಯವರನ್ನು ವಿಚಾರಣೆಗೆ ಒಳಪಡಿಸಿತ್ತು.
ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಕುರಿತು ಇದುವರೆಗೆ ಎಂಟು ಎಫ್ಐಆರ್‌ಗಳನ್ನು ಸಿಬಿಐ ದಾಖಲಿಸಿದೆ. ಅಚ್ಚರಿಯೆಂದರೆ, ಎಲ್ಲೂ ಕೂಡ ಕಲ್ಮಾಡಿಯವರ ಹೆಸರನ್ನು ದಾಖಲು ಮಾಡಿಲ್ಲ. ಎರಡನೇ ಬಾರಿಯ ವಿಚಾರಣೆಯ ನಂತರವಾದರೂ, ಪ್ರಕರಣ ದಾಖಲಾಗಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪತ್ರಕರ್ತರ ವಿಚಾರಣೆ... ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಿಕೊಳ್ಳುತ್ತಿರುವ ಮಾಧ್ಯಮಗಳು ಹಗರಣಗಳನ್ನು ಬಯಲಿಗೆ ಎಳೆಯುತ್ತಿರುವ ನಡುವೆ, ಅದರಲ್ಲೇ ಸಿಲುಕುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅದರಲ್ಲೊಂದು 2ಜಿ ಹಗರಣ. ಈ ಸಂಬಂಧ ಹಲವು ಪತ್ರಕರ್ತರು ಈಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗಿ ವಿವರಣೆ ನೀಡುತ್ತಿದ್ದಾರೆ.
ಕುಖ್ಯಾತ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಜತೆ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ನಡೆಸಿದ ಸಂಭಾಷಣೆಗಳನ್ನು ಪ್ರಕಟಿಸಿದ ಎರಡು ನಿಯತಕಾಲಿಕಗಳ ಸಂಪಾದಕರುಗಳನ್ನು ಸೋಮವಾರ ಮುರಳಿ ಮನೋಹರ ಜೋಶಿ ನೇತೃತ್ವದ ಪಿಎಸಿ ವಿಚಾರಣೆ ನಡೆಸಿದೆ.
'ಔಟ್‌ಲುಕ್' ಪ್ರಧಾನ ಸಂಪಾದಕ ವಿನೋದ್ ಮೆಹ್ತಾ ಮತ್ತು 'ಓಪನ್' ಸಂಪಾದಕ ಮನು ಜೋಸೆಫ್ ಅವರನ್ನು ಪಿಎಸಿ ವಿಚಾರಣೆ ನಡೆಸಿದೆ. ದೂರವಾಣಿ ಸಂಭಾಷಣೆಗಳನ್ನು ಪ್ರಕಟಿಸಿದ್ದು ಯಾಕೆ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಸಂಪಾದಕರುಗಳಲ್ಲಿ ಪ್ರಶ್ನಿಸಲಾಗಿದೆ.
ಮುಂದಿನ ವಿಚಾರಣೆಗೆ ಹಾಜರಾಗುವಂತೆ ಪತ್ರಕರ್ತರಾದ ಬರ್ಖಾ ದತ್ ಮತ್ತು ವೀರ್ ಸಾಂಘ್ವಿ ಅವರಿಗೂ ಪಿಎಸಿ ಸೂಚಿಸಿದೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ವಿಚಾರಣೆಯ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಪತ್ರಕರ್ತರನ್ನು ವಿಚಾರಣೆಗೊಳಪಡಿಸುವ ವಿಚಾರವನ್ನು ಖಚಿತಪಡಿಸಲು ಅಧಿಕಾರಿಗಳು ಮತ್ತು ಪಿಎಸಿ ಸದಸ್ಯರು ನಿರಾಕರಿಸಿದ್ದಾರೆ.