'ಕಾಸಿಗಾಗಿ ಓಟು' ಆರೋಪ ಜನತಾ ನ್ಯಾಯಾಲಯದಲ್ಲಿ ಹುಸಿಯಾಗಿದೆ ಎಂಬ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಾದಕ್ಕೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಬಲವಾದ ಏಟು ನೀಡಿದ್ದಾರೆ. ಹಾಗಿದ್ದರೆ, ಕೊಲೆ ಮಾಡಿದ ಅಥವಾ ಅತ್ಯಾಚಾರ ಮಾಡಿದ ಕ್ರಿಮಿನಲ್‌ಗಳು ಚುನಾವಣೆಯಲ್ಲಿ ಗೆದ್ದರೆ ಅವರು ತಪ್ಪು ಮಾಡಿಲ್ಲ ಎಂದು ಅರ್ಥವೇ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
2008ರಲ್ಲಿ ಅಮೆರಿಕಾ ಜತೆಗಿನ ಪರಮಾಣು ಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡ ನಂತರ ವಿಶ್ವಾಸ ಮತ ಯಾಚಿಸುವ ಅನಿವಾರ್ಯತೆ ಯುಪಿಎಗೆ ಎದುರಾಗಿತ್ತು. ಈ ಸಂದರ್ಭದಲ್ಲಿ ಹಲವು ಸಂಸದರಿಗೆ ಲಂಚ ನೀಡಿದ ಆರೋಪ ಕಾಂಗ್ರೆಸ್ ಮತ್ತು ಸರಕಾರದ ಮೇಲಿದೆ. ಇದನ್ನು ಇತ್ತೀಚಿನ ವಿಕಿಲೀಕ್ಸ್ ರಹಸ್ಯ ದಾಖಲೆಗಳೂ ಹೇಳಿದ್ದವು.
ಈ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಪ್ರಧಾನಿ ಸಿಂಗ್, ನನ್ನ ಸರಕಾರ ಅಥವಾ ಕಾಂಗ್ರೆಸ್ ಪಕ್ಷವು ಯಾರಿಗೂ ಮತಕ್ಕಾಗಿ ಹಣ ನೀಡಿಲ್ಲ. ಲಂಚ ಆರೋಪವೇ ಸುಳ್ಳು ಎನ್ನುವುದು ನಂತರ ನಡೆದ ಮಹಾ ಚುನಾವಣೆಯಲ್ಲಿ ಜನತೆ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದರು.
ಮತಕ್ಕಾಗಿ ಹಣ ವಾದವು 2009ರ ಲೋಕಸಭಾ ಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪಿನಿಂದ ಸುಳ್ಳೆಂದು ಸಾಬೀತಾಗಿದೆ ಎಂದು ಪ್ರಧಾನಿ ಹೇಳಿರುವುದಕ್ಕೆ ಸುಷ್ಮಾ ತಿರುಗೇಟು ನೀಡಿದ್ದಾರೆ.
'ಕೊಲೆ ಅಥವಾ ಅತ್ಯಾಚಾರ ಅಥವಾ ಯಾವುದೇ ಇತರ ಕೃತ್ಯಗಳನ್ನು ಎಸಗಿದ ಪ್ರತಿ ಕ್ರಿಮಿನಲ್ ಆರೋಪಿ ಚುನಾವಣೆಯೊಂದರಲ್ಲಿ ಗೆದ್ದರೆ ಆತ ದೋಷಮುಕ್ತನಾದೆ ಎಂದು ವಾದಿಸುತ್ತಿರುವಂತೆ ಪ್ರಧಾನಿಯವರ ಹೇಳಿಕೆಯಿದೆ. ಇಂತಹ ವಾದವನ್ನು ಪ್ರಧಾನ ಮಂತ್ರಿ ಮಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ' ಎಂದು ಬಿಜೆಪಿ ಹಿರಿಯ ನಾಯಕಿ ಅತೃಪ್ತಿ ವ್ಯಕ್ತಪಡಿಸಿದರು.
ಸಿಪಿಎಂನ ಸೀತಾರಾಮ್ ಯೆಚೂರಿ ಕೂಡ ಪ್ರಧಾನಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಸಿಗಾಗಿ ಓಟು ಆರೋಪದ ತನಿಖೆಗೆ ನೇಮಕಗೊಂಡಿದ್ದ ಸಂಸದೀಯ ಸಮಿತಿಯು, ಅಕ್ರಮಗಳು ನಡೆದಿರುವ ಬಗ್ಗೆ ಸೂಕ್ತ ಪುರಾವೆಗಳು ದೊರಕಿಲ್ಲ ಎಂದು ಪ್ರಧಾನಿ ಹೇಳಿದ್ದರು.
ಆದರೆ ಸೂಕ್ತ ತನಿಖಾ ಸಂಸ್ಥೆಯೊಂದರ ಮೂಲಕ ಹೆಚ್ಚಿನ ತನಿಖೆ ನಡೆಸಬೇಕು ಎಂದು ಸಮಿತಿಯ ಬಹುಮತದ ಅಭಿಪ್ರಾಯವಿತ್ತು. ಪ್ರಕರಣವನ್ನು ಆದರೂ ಮುಕ್ತಾಯಗೊಳಿಸಲಾಯಿತು. ತನಿಖೆಗೆ ವಹಿಸಲಿಲ್ಲ ಎಂದು ಯೆಚೂರಿ ಹೇಳಿದ್ದಾರೆ.
ಪರಸ್ಪರ ಹಕ್ಕುಚ್ಯುತಿಗೆ ಸಿದ್ಧತೆ... ವಿಕಿಲೀಕ್ಸ್ ರಹಸ್ಯ ದಾಖಲೆಗಳು ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ, ವಿವಾದಕ್ಕೆ ಕಾರಣವಾಗುತ್ತಿರುವುದರ ನಡುವೆ ಇದು ರಾಜಕೀಯ ಮೇಲಾಟಕ್ಕೂ ವೇದಿಕೆಯಾಗುತ್ತಿದೆ. ಇದೀಗ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಬಿಜೆಪಿ, ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿನ 'ಕಾಸಿಗಾಗಿ ಓಟು' ಪ್ರಕರಣದ ತನಿಖೆಯಲ್ಲಿ ಲಂಚದ ಯಾವುದೇ ಪುರಾವೆಗಳು ದೊರಕಿಲ್ಲ ಎಂದು ಸಮಿತಿ ಹೇಳಿದೆ ಎಂದು ಹೇಳುವ ಮೂಲಕ ಪ್ರಧಾನಿಯವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ ಎಂದು ಬಿಜೆಪಿ ನಿನ್ನೆಯೇ ಪ್ರಕಟಿಸಿದೆ.
ಅತ್ತ ಕಾಂಗ್ರೆಸ್ ಕೂಡ ಇದೇ ತಂತ್ರ ಅನುಸರಿಸಲು ಸಿದ್ಧವಾಗಿದೆ. ಲೋಕಸಭಾ ಸ್ಪೀಕರ್ ಅವರನ್ನು ಧಿಕ್ಕರಿಸಿದ್ದಾರೆ ಎಂದು ಆರೋಪಿಸಿ ಸುಷ್ಮಾ ಸ್ವರಾಜ್ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಲಿದೆ. ಕಾಂಗ್ರೆಸ್‌ನ ಕೆಲ ಸದಸ್ಯರು ಇದಕ್ಕೆ ಸಿದ್ಧರಾಗಿದ್ದಾರೆ ಎಂದು ಮೂಲಗಳು ಹೇಳಿವೆ.