ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯಮೂರ್ತಿ ದಿನಕರನ್ ಮೇಲೆ ಭ್ರಷ್ಟಾಚಾರದ 16 ಆರೋಪ
(Corruption charges | Justice Dinakaran | impeachment | Karnataka High Court)
ನ್ಯಾಯಮೂರ್ತಿ ದಿನಕರನ್ ಮೇಲೆ ಭ್ರಷ್ಟಾಚಾರದ 16 ಆರೋಪ
ನವದೆಹಲಿ, ಶನಿವಾರ, 19 ಮಾರ್ಚ್ 2011( 12:21 IST )
ಸಂಸತ್ತಿನಲ್ಲಿ 'ವಾಗ್ದಂಡನೆ' ಪ್ರಕ್ರಿಯೆ ಎದುರಿಸುತ್ತಿರುವ ಸಿಕ್ಕಿಂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಮೇಲೆ ರಾಜ್ಯಸಭೆಯಿಂದ ನೇಮಕಗೊಂಡ ಸಮಿತಿಯೊಂದು ಭ್ರಷ್ಟಾಚಾರ ಮತ್ತು ಅವ್ಯವಹಾರದ 16 ಆರೋಪಗಳನ್ನು ಹೊರಿಸಿದೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಫ್ತಾಬ್ ಆಲಂ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಸ್. ಕೇಹರ್, ಖ್ಯಾತ ನ್ಯಾಯವಾದಿ ಪಿ.ಪಿ. ರಾಯ್ ಅವರು ಮಾರ್ಚ್ 16ರಂದು ದಿನಕರನ್ ಅವರಿಗೆ ಆರೋಪಪಟ್ಟಿ ನೀಡಿದ್ದು, ಏಪ್ರಿಲ್ 9ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
ಆದಾಯವನ್ನು ಮೀರಿದ ಸಂಪತ್ತು, ಸಾರ್ವಜನಿಕ, ದಲಿತರು ಮತ್ತು ಸಮಾಜದದ ದುರ್ಬಲರ ಆಸ್ತಿಯನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವುದು, ತನ್ನ ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳಿಗೆ ತಮಿಳುನಾಡು ವಸತಿ ಮಂಡಳಿಯಿಂದ ಐದು ನಿವೇಶನಗಳನ್ನು ಪಡೆದಿರುವುದು, ಬೇನಾಮಿ ವ್ಯವಹಾರಗಳು, ತಮಿಳುನಾಡು ಭೂ ಸುಧಾರಣಾ ಕಾಯ್ದೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರುವುದು, ಸಾಕ್ಷ್ಯಗಳ ನಾಶ, ಮಾರಾಟ ಒಪ್ಪಂದಗಳಲ್ಲಿ ಕಡಿಮೆ ಮೌಲ್ಯವನ್ನು ನಮೂದು ಮಾಡಿರುವುದು, ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ಅಕ್ರಮ ನಿರ್ಮಾಣ ಮುಂತಾದ ಆರೋಪಗಳನ್ನು ದಿನಕರನ್ ಅವರ ಮೇಲೆ ಹೊರಿಸಲಾಗಿದೆ.
ಇಷ್ಟು ಮಾತ್ರವಲ್ಲದೆ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ನ್ಯಾಯಾಂಗಕ್ಕೆ ಅಗೌರವ ತರುವ ರೀತಿಯಲ್ಲಿ ನ್ಯಾಯಾಧೀಶರ ಪಾಳಿಯನ್ನು ಅನುಕ್ರಮ ರಹಿತಗೊಳಿಸಿರುವುದು ಮತ್ತು ಆಡಳಿತಾತ್ಮಕ ಅಪ್ರಾಮಾಣಿಕತೆಯ ಆರೋಪಗಳನ್ನೂ ಹೊರಿಸಲಾಗಿದೆ. ನ್ಯಾಯಾಧೀಶರುಗಳ ವರ್ಗಾವಣೆ ಮತ್ತು ಸಿಬ್ಬಂದಿಗಳ ನೇಮಕಾತಿಯಲ್ಲಿ ಅಕ್ರಮ ನೀತಿಗಳನ್ನು ಅನುಸರಿಸಿದ್ದಾರೆ ಎಂದೂ ಆಪಾದಿಸಲಾಗಿದೆ.
ಈ ಎಲ್ಲಾ ಆರೋಪಗಳ ಕುರಿತು ವಾದಿಸಲು ತಮ್ಮ ಆಯ್ಕೆಯ ವಕೀಲರೊಬ್ಬರನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ದಿನಕರನ್ ಅವರಿಗೆ ಸಮಿತಿ ನೀಡಿದೆ.
2009ರ ಆಗಸ್ಟ್ ತಿಂಗಳಲ್ಲಿ ದಿನಕರನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿತ್ತು. ಆದರೆ ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಇದಕ್ಕೆ ತಡೆ ನೀಡಲಾಗಿತ್ತು.
ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಮಹಾಭಿಯೋಗದ ಮೂಲಕ ವಜಾಗೊಳಿಸಲು 2009ರ ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ನಿಲುವಳಿಯೊಂದನ್ನು ಅಂಗೀಕರಿಸಲಾಗಿತ್ತು. ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿಯವರು ಆರೋಪಗಳ ಕುರಿತ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದ್ದರು.