ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಡಿಯಲ್ಲಿ ಚೀನಿ ಸೇನೆ ಬೀಡುಬಿಟ್ಟಿರುವುದು ಖಚಿತ: ಅಮೆರಿಕ (China troops | Pakistan | PoK | US security agencies | Indian Army)
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉತ್ತರ ಭಾಗದ ಗುರೇಜ್ ಸೆಕ್ಟರ್‌ನಲ್ಲಿ ಚೀನಿ ಸೈನಿಕರು ಜಮಾವಣೆಗೊಳ್ಳುತ್ತಿದ್ದಾರೆ ಎಂಬ ವರದಿಯನ್ನು ಚೀನಾ ಮತ್ತು ಪಾಕಿಸ್ತಾನ ತಳ್ಳಿಹಾಕುತ್ತಿದ್ದರೆ, ಮತ್ತೊಂದೆಡೆ ಚೀನಿ ಸೈನಿಕರು ಬೀಡು ಬಿಟ್ಟಿರುವುದು ಹೌದು ಎಂದು ಅಮೆರಿಕದ ಭದ್ರತಾ ಏಜೆನ್ಸಿ ಖಚಿತಪಡಿಸಿರುವುದಾಗಿ ಪ್ರಮುಖ ದೈನಿಕವೊಂದರ ವರದಿ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯ ಬಳಿ ಚೀನಿ ಸೇನೆ ಬೀಡುಬಿಟ್ಟಿರುವುದಾಗಿ ಲೆಫ್ಟಿನೆಂಟ್ ಜನರಲ್ ಕೆ.ಟಿ.ಪಟ್ನಾಯಕ್ ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಆತಂಕ ಹೊರಹಾಕಿದ್ದರು. ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಉತ್ತರ ಭಾಗದಲ್ಲಿ ಚೀನಿ ಸೈನಿಕರ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಚೀನಾವು ಅಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳ ಉನ್ನತೀಕರಣ ಮತ್ತು ನಿರ್ಮಾಣ ಕಾರ್ಯದಲ್ಲಿ ತೊಡಗಿದೆ ಎಂದು ಪಟ್ನಾಯಕ್ ತಿಳಿಸಿದ್ದರು.

ಆದರೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸೇನೆ ಬೀಡು ಬಿಟ್ಟಿದೆ ಎಂಬ ವರದಿಯನ್ನು ಪಾಕಿಸ್ತಾನ ಮತ್ತು ಚೀನಾ ಸಾರಸಗಟಾಗಿ ತಳ್ಳಿಹಾಕಿವೆ. ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಚೀನಾ ವಿದೇಶಾಂಗ ಸಚಿವ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಪಾಕಿಸ್ತಾನ ಕೂಡ ಇದು ಸುಳ್ಳು ಸುದ್ದಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಟೆಹ್‌ಮಿನಾ ಹೇಳಿದ್ದಾರೆ.

ಏತನ್ಮಧ್ಯೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ಸೇನೆ ಜಮಾವಣೆಗೊಳ್ಳುತ್ತಿರುವುದು ಹೌದು ಎಂದು ಅಮೆರಿಕದ ಭದ್ರತಾ ಏಜೆನ್ಸಿ ಭಾರತೀಯ ಅಧಿಕಾರಿಗಳಿಗೆ ಖಚಿತಪಡಿಸಿದ್ದಾರೆ ಎಂದು ವರದಿ ವಿವರಿಸಿದೆ. ಈ ಬಗ್ಗೆ ನಮಗೆ ಗುಪ್ತಚರ ಇಲಾಖೆಯ ಬಲವಾದ ಮಾಹಿತಿ ಲಭಿಸಿರುವುದಾಗಿ ಅಮೆರಿಕ ತಿಳಿಸಿರುವುದಾಗಿ ವರದಿ ಹೇಳಿದೆ.
ಇವನ್ನೂ ಓದಿ