ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಜನಲೋಕಪಾಲ್ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಡಿ' (Anna Hazare | Kapil Sibal | Lokpal Bill | resign | Kumaraswamy)
'ಜನಲೋಕಪಾಲ್ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಡಿ'
ನವದೆಹಲಿ, ಸೋಮವಾರ, 11 ಏಪ್ರಿಲ್ 2011( 15:25 IST )
PTI
'ಜನ ಲೋಕಪಾಲ್ ಮಸೂದೆಯಿಂದ ಏನೂ ಪ್ರಯೋಜನವಾಗದು ಎಂಬ ಭಾವನೆ ಹೊಂದಿರುವ ಕೇಂದ್ರ ಸಚಿವ ಕಪಿಲ್ ಸಿಬಲ್ ಜನಲೋಕಪಾಲ್ ಮಸೂದೆ ಜಂಟಿ ಸಮಿತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆಯಲಿ' ಎಂದು ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಿಳಿಸಿದ್ದಾರೆ.
ಲೋಕಪಾಲ್ ಮಸೂದೆಯಿಂದ ಜನರಿಗೆ ಹೇಗೆ ಸಹಾಯವಾಗುತ್ತದೆ. ಯಾವುದೇ ಒಬ್ಬ ರಾಜಕಾರಣಿಯ ನೆರವು ಇಲ್ಲದೆ ಬಡವನೊಬ್ಬನ ಮಗನ ಖಾಯಿಲೆ ಗುಣಪಡಿಸಲೂ ಸಾಧ್ಯವಿಲ್ಲ. ಕುಡಿಯುವ ನೀರು ಅಥವಾ ಶೌಚಾಲಯ ಬೇಕಿದ್ದರೆ ಲೋಕಪಾಲ್ ಮಸೂದೆಯಿಂದ ಸಾಮಾನ್ಯರಿಗೆ ಸಹಾಯಕವಾಗಲಿದೆಯೇ ಎಂದು ಪ್ರಶ್ನಿಸಿದ್ದ ಕಪಿಲ್ ಸಿಬಲ್.. ಹಾಗಿದ್ದ ಮೇಲೆ ಈ ಮಸೂದೆಯಿಂದ ಏನು ಪ್ರಯೋಜನ ಎಂದು ಲಘುವಾಗಿ ಮಾತನಾಡಿದ್ದರು.
ಆ ನಿಟ್ಟಿನಲ್ಲಿ ಕಪಿಲ್ ಸಿಬಲ್ ಬೇಜಬ್ದಾರಿಯುತ ಹೇಳಿಕೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಹಜಾರೆ, ಈ ಮಸೂದೆ ಜಾರಿಯಿಂದ ಏನೂ ಪ್ರಯೋಜನಾಗುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರೆ, ಅವರು ಲೋಕಪಾಸ್ ಸಮಿತಿ ಸದಸ್ಯತ್ವಕ್ಕೆ ಕೂಡಲೇ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಸಿಬಲ್‌ಗೆ ಆ ರೀತಿಯ ಪೂರ್ವಾಗ್ರಹ ಇದ್ದ ಮೇಲೆ ಸುಮ್ಮನೆ ಅವರ ಮತ್ತು ನಮ್ಮ ಸಮಯವನ್ನು ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅಣ್ಣಾ, ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ್ ಮಸೂದೆಯಿಂದ ಪ್ರಯೋಜನವಾಗದು ಎಂದಾದ ಮೇಲೆ ಅವರು ಆ ಸಮಿತಿಯಲ್ಲಿ ಇರಬಾರದು. ಅವರು ರಾಜೀನಾಮೆ ಕೊಟ್ಟು ಹೊರಹೋಗಬೇಕು ಎಂದು ಸಲಹೆ ನೀಡಿದರು.
ಗಾಂಧಿ ಕುರಿತು ಎಚ್‌ಡಿಕೆ ಹೇಳಿಕೆ ನಮ್ಮ ದೌರ್ಭಾಗ್ಯ: ಪ್ರಸ್ತುತ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಕೂಡ ಬದುಕಿದ್ದರೆ ಅವರು ಒಂದೋ ರಾಜಕೀಯ ಬಿಡಬೇಕಿತ್ತು, ಇಲ್ಲವೇ ಅವರು ಭ್ರಷ್ಟಾಚಾರ ಮಾಡಬೇಕಿತ್ತು ಎಂದು ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಣ್ಣಾ ಹಜಾರೆ, ಮಹಾತ್ಮನ ಕುರಿತು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ದೌರ್ಭಾಗ್ಯವಾದದ್ದು ಎಂದು ಹೇಳಿದರು.
ಅಲ್ಲದೇ ಜನಲೋಕಪಾಲ್ ಮಸೂದೆ ರಚನೆ ಜಂಟಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅರವಿಂದ ಕೇಜ್ರಿವಾಲ್, ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಸರಿಯಾದುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಒಂದು ವೇಳೆ ಮಹಾತ್ಮಗಾಂಧಿ ಇಂದಿನ ಸ್ಥಿತಿಯಲ್ಲಿ ಬದುಕಿದ್ದರೆ ಅವರು ಚುನಾವಣೆಗೆ ನಿಂತಲ್ಲಿ ಠೇವಣಿ ಕಳೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ಕೇಜ್ರಿವಾಲ್ ಬೇಜವಾಬ್ದಾರಿ ವ್ಯಕ್ತಿ-ಸಿಬಲ್: ಜನಲೋಕಪಾಲ್ ಮಸೂದೆ ಜಾರಿ ಕುರಿತ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಕೇಜ್ರಿವಾಲ್ ಬೇಜವಾಬ್ದಾರಿ ವ್ಯಕ್ತಿ ಎಂದು ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ರಾದ್ದಾಂತ ಮಾಡಲಾಗಿದೆ. ನಾನು ಅಣ್ಣಾ ಹಜಾರೆ ಮತ್ತು ಮಸೂದೆಯನ್ನು ಬೆಂಬಲಿಸುತ್ತೇನೆ ವಿನಃ, ಅದರಿಂದ ಯಾವುದೇ ಪ್ರಯೋಜನಾಗಲ್ಲ ಎಂದು ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.