ವಿವಾದಾತ್ಮಕ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಲೋಕಪಾಲ ಸಮಿತಿ ಸದಸ್ಯರಾದ ಖ್ಯಾತ ವಕೀಲ ಶಾಂತಿ ಭೂಷಣ್ ಮತ್ತು ಅವರ ಪುತ್ರ ಪ್ರಶಾಂತ್ ಭೂಷಣ್ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅಣ್ಣಾ ಹಜಾರೆ ಅವರ ತಂಡದಲ್ಲಿರುವ ಬಹುತೇಕ ಸದಸ್ಯರು ಕಳಂಕಿತರಾಗಿದ್ದಾರೆ ಎಂದು ಆಪಾದಿಸಿದರು.
ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸಿಂಗ್ ಪರ ತೀರ್ಪು ನೀಡಲು ನ್ಯಾಯಾಧೀಶರಿಗೆ 4 ಕೋಟಿ ರೂ. ನೀಡುವ ಬಗ್ಗೆ ಶಾಂತಿ ಭೂಷಣ್ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅಮರ್ ಸಿಂಗ್ ಅವರ ನಡುವೆ ನಡೆದ ಮಾತುಕತೆ ವಿವರಗಳನ್ನೊಳಗೊಂಡ 4 ಸಿಡಿಗಳ ಪ್ರತಿಯನ್ನು ದೆಹಲಿ ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದರು.
ಸಿಡಿ ನಕಲಿಯಾಗಿದೆ ಎಂದು ಶಾಂತಿಭೂಷಣ್ ಅವರ ಪುತ್ರ ಪ್ರಶಾಂತಿ ಭೂಷಣ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮರ್ ಸಿಂಗ್, ಶಾಂತಿ ಭೂಷಣ್ ಪ್ರಾಮಾಣಿಕರಾಗಿದ್ದರೆ ಪ್ರಯೋಗಾಲಯದಲ್ಲಿ ತಮ್ಮ ಧ್ವನಿ ಮಾದರಿಯ ಪರೀಕ್ಷೆಗೊಳಗಾಗಲಿ ಎಂದು ಸವಾಲೆಸೆದರು. ಪ್ರಯೋಗಾಲಯದಲ್ಲಿ ಸಿಡಿಯ ಪರೀಕ್ಷೆ ನಡೆಸಿದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಶಾಂತಿ ಭೂಷಣ್ ಅವರ ಪುತ್ರ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯ ಸದಸ್ಯರಾಗಿರುವ ಭೂಷಣ್ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರ ಮುಂದಿದೆ.
ಹೈದರಾಬಾದ್ ಸೇರಿದಂತೆ ಎರಡು ಪ್ರತ್ಯೇಕ ವಿಧಿವಿಜ್ಞಾನ ಪ್ರಯೋಗಗಳು ಸಿಡಿ ಕುರಿತು ನೀಡಿರುವ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಅಮರ್ ಸಿಂಗ್ ತಿಳಿಸಿದ್ದಾರೆ.