ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ಬೆಂಬಲಿಸಲು ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ: ಸಿಂಘ್ವಿ (Yeddyurappa | Illegal mining | Abhishek Singhvi | Anna Hazare)
ಹಜಾರೆ ಬೆಂಬಲಿಸಲು ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ: ಸಿಂಘ್ವಿ
ಮೈಸೂರು, ಶನಿವಾರ, 23 ಏಪ್ರಿಲ್ 2011( 20:27 IST )
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ಬೆಂಬಲಿಸಲು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಹಾಗೂ ಸ್ವತಃ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಆಪಾದಿಸಿದೆ.
ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ನೇಮಿಸಿದ ಸಿಇಸಿ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿ ನೀಡಿದೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಆಂದೋಲನವನ್ನು ಯಡಿಯೂರಪ್ಪ ಹಾಗೂ ಕರ್ನಾಟಕ ಬಿಜೆಪಿ ರಾಜ್ಯ ಘಟಕ ಬೆಂಬಲಿಸಿತ್ತು. ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಯಬೇಕು ಹಾಗೂ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಂಘ್ವಿ ಆಗ್ರಹಿಸಿದ್ದಾರೆ.
ರಾಜ್ಯ ಮಾನವ ಹಕ್ಕು ಇಲಾಖೆ, ದಕ್ಷಿಣ ಭಾರತ ವಕೀಲರ ಮತ್ತು ಮಾನವ ಹಕ್ಕು ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಕಾನೂನು ಮತ್ತು ಮಾನವ ಹಕ್ಕು ಇಲಾಖೆಯ ಅಧ್ಯಕ್ಷರೂ ಆಗಿರುವ ಸಿಂಘ್ವಿ, ಯಡಿಯೂರಪ್ಪ ಆಗಲೀ ಅಥವಾ ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕಾಗಲೀ ಹಜಾರೆ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲಿಸುವ ಯಾವುದೇ ಹಕ್ಕಿಲ್ಲ ಎಂದು ಆಪಾದಿಸಿದರು.