ಕಾಮನ್‌ವೆಲ್ತ್ ಕ್ರೀಡಾಕೂಟ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಭಾರತೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ, ಕೇಂದ್ರ ಸರಕಾರವನ್ನು ಒತ್ತಾಯಿಸಿವೆ.
ಕಲ್ಮಾಡಿ ಬಂಧನ ಸಮುದ್ರದ ಒಂದು ಬಿಂದುವಷ್ಟೇ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಕಲ್ಮಾಡಿ ಅವರೊಂದಿಗೆ ಭಾಗಿಯಾಗಿದ್ದ ಇನ್ನಿತರ ಆಪಾದಿತರನ್ನು ಬಂಧಿಸಿಲ್ಲ. ಇತರೆ ಆರೋಪಿಗಳನ್ನೂ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಲ್ಮಾಡಿ ಬಂಧನ ಕುರಿತು ಪ್ರತಿಕ್ರಿಯಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್, ಕಲ್ಮಾಡಿ ಅವರನ್ನು ತಡವಾಗಿ ಬಂಧಿಸಿರುವುದರಿಂದ ಪ್ರಕರಣದ ಬಗ್ಗೆ ಸಮರ್ಪಕವಾಗಿ ವಿಚಾರಣೆ ನಡೆಯುವ ವಿಶ್ವಾಸವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಟ್, ಪ್ರಕರಣದಲ್ಲಿ ದೆಹಲಿ ಸರಕಾರ ಹಾಗೂ ಕೇಂದ್ರ ಸಚಿವಾಲಯದ ಅಧೀನದಲ್ಲಿರುವ ಕೆಲವು ಇಲಾಖೆಗಳು ಭಾಗಿಯಾಗಿರುವುದನ್ನು ಈ ಬಗ್ಗೆ ತನಿಖೆ ನಡೆಸುತ್ತಿರುವ ಶುಂಗ್ಲು ಸಮಿತಿ ಹಾಗೂ ಮಹಾ ಲೆಕ್ಕ ಪರಿಶೋಧಕ (ಸಿಎಜಿ) ವರದಿ ಬಹಿರಂಗ ಪಡಿಸಿದೆ ಎಂದು ಕಾರಟ್ ಹೇಳಿದ್ದಾರೆ.
ಶಂಗ್ಲು ಸಮಿತಿ ಹಾಗೂ ಸಿಎಜಿ ಪ್ರಸ್ತಾಪಿಸಿದ ಅಂಶಗಳ ಕುರಿತು ಕ್ರಮ ಕೈಗೊಳ್ಳುವುದು ಅಗತ್ಯ. ವಿಚಾರಣೆಯನ್ನು ಒಂದೇ ಪ್ರಕರಣಕ್ಕೆ ಸೀಮಿತಗೊಳಿಸುವುದು ಬೇಡ, ಸಾವಿರಾರು ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಕಾರಟ್ ಒತ್ತಾಯಿಸಿದ್ದಾರೆ.
ಅಕ್ರಮಗಳಲ್ಲಿ ಭಾಗಿಯಾಗಿರುವ ಇತರೆ ಆಪಾದಿತರ ಮೇಲೂ ಸಿಬಿಐ ದೂರು ದಾಖಲಿಸಬೇಕು ಎಂದು ಕಾರಟ್ ಆಗ್ರಹಿಸಿದ್ದಾರೆ.