ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ನ್ಯಾಯ'ದ ದಾರಿಯಲ್ಲಿ ಸುರೇಶ್ ಕಲ್ಮಾಡಿ ಮೇಲೆ ಚಪ್ಪಲಿ ಎಸೆತ
(Suresh Kalmadi, CWG Scam, Commonwealth Games Scam, Kapil Thakur, Chappal, Shoe-gate)
'ನ್ಯಾಯ'ದ ದಾರಿಯಲ್ಲಿ ಸುರೇಶ್ ಕಲ್ಮಾಡಿ ಮೇಲೆ ಚಪ್ಪಲಿ ಎಸೆತ
ನವದೆಹಲಿ, ಮಂಗಳವಾರ, 26 ಏಪ್ರಿಲ್ 2011( 14:26 IST )
ಬಹು ಕೋಟಿ ರೂ.ಗಳ ಕಾಮನ್ವೆಲ್ತ್ ಗೇಮ್ಸ್ ಹಗರಣದಲ್ಲಿ ಆರು ತಿಂಗಳ ಬಳಿಕ ಸಿಬಿಐನಿಂದ ಬಂಧಿತರಾಗಿರುವ ಕ್ರೀಡಾಕೂಟ ಸಂಘಟನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರ ಮೇಲೆ ಚಪ್ಪಲಿ ಎಸೆದ ಘಟನೆ ನಡೆಯಿತು.
ದೆಹಲಿಯ ಪಾಟಿಯಾಲ ಹೌಸ್ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಕಲ್ಮಾಡಿ ಅವರನ್ನು ಕರೆ ತರುತ್ತಿದ್ದಾಗ ಮಂಗಳವಾರ ಅಪರಾಹ್ನ ಈ ಘಟನೆ ನಡೆದಿದೆ. ಕಪಿಲ್ ಠಾಕೂರ್ ಎಂಬ ವ್ಯಕ್ತಿಯು ಕಲ್ಮಾಡಿಯನ್ನು ಬಿಗಿ ಭದ್ರತೆಯಲ್ಲಿ ಕೋರ್ಟಿಗೆ ಕರೆತರುತ್ತಿದ್ದಾಗ, ಹಿಂದಿನಿಂದ ಬಂದು ಚಪ್ಪಲಿ ಕೈಯಲ್ಲಿ ಹಿಡಿದು ಹಲ್ಲೆ ನಡೆಸಲು ಪ್ರಯತ್ನಿಸಿದ. ಆದರೆ ತಕ್ಷಣವೇ ಪೊಲೀಸರು ಆತನನ್ನು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂಲತಃ ಮಧ್ಯ ಪ್ರದೇಶದವನಾದ ಕಪಿಲ್ ಠಾಕೂರ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ. ಆತನ ಕೈಯಲ್ಲಿದ್ದ ಕರ ಪತ್ರದಲ್ಲಿ, ಇಂಥವರ ಮೇಲೆ ಇಪ್ಪತ್ತನಾಲ್ಕು ಗಂಟೆಗಳೊಳಗೆ ಕ್ರಮ ಕೈಗೊಳ್ಳದೇ ಹೋದರೆ ತಾನೇ ಶಿಕ್ಷೆ ವಿಧಿಸುವುದಾಗಿ ಬರೆದಿದ್ದ ಎಂದು ಮೂಲಗಳು ತಿಳಿಸಿವೆ. ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭ ಟೈಮಿಂಗ್-ಸ್ಕೋರಿಂಗ್-ಫಲಿತಾಂಶ ವ್ಯವಸ್ಥೆಯ ಗುತ್ತಿಗೆಯನ್ನು ಸ್ವಿಸ್ ಕಂಪನಿಯೊಂದಕ್ಕೆ ಅಕ್ರಮವಾಗಿ ನೀಡಿದ್ದು,ಇದರಿಂದ ದೇಶದ ಖಜಾನೆಗೆ 95 ಕೋಟಿ ರೂ. ನಷ್ಟವಾಗಿದೆ ಎಂಬ ಆರೋಪದಲ್ಲಿ ಕಲ್ಮಾಡಿಯನ್ನು ಸೋಮವಾರ ಸಿಬಿಐ ಬಂಧಿಸಿತ್ತು.
ಈ ಮೊದಲು ಜಾರ್ಜ್ ಬುಷ್ ಮೇಲೆ ಇರಾಕ್‌ನಲ್ಲಿ ಚಪ್ಪಲಿ ಎಸೆದ ಘಟನೆಯಿಂದ ಆರಂಭವಾಗಿ, ದೆಹಲಿಯಲ್ಲಿಯೂ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರ ಮೇಲೂ ಪಾದರಕ್ಷೆ ಎಸೆದ ಘಟನೆಗಳು ನಡೆದಿದ್ದವು.