ಕಾಮನ್ವೆಲ್ತ್ ಕ್ರೀಡಾಕೂಟದ ಆರೋಪಿ ಸುರೇಶ್ ಕಲ್ಮಾಡಿ ಮಂಗಳವಾರ ಪಟಿಯಾಲಾ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ವಕೀಲರೊಬ್ಬರು ಚಪ್ಪಲಿ ತೂರಿದ್ದರು. ಆದರೆ ಇದು ಇತಿಹಾಸವೇ ತಿರುವು ಮುರುವಾದ ಪ್ರಸಂಗ. ಏಕೆಂದರೆ, ಇದೇ ಕಲ್ಮಾಡಿ ಅವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರಿಗೆ ಚಪ್ಪಲಿ ತೂರಿದ್ದರು!
1970ರಲ್ಲಿ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪುಣೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ನೇತೃತ್ವದ ಕಾರ್ಯಕರ್ತರ ತಂಡವು ಮೊರಾರ್ಜಿ ಅವರ ಕಾರು ತಡೆದು ಚಪ್ಪಲಿ ತೂರಿತ್ತು. ಮೊರಾರ್ಜಿ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆಯನ್ನೂ ನಡೆಸಿದ್ದರು. ಸದ್ಯಕ್ಕೆ ಅವರಿದನ್ನು ತಳ್ಳಿ ಹಾಕುತ್ತಿದ್ದಾರಾದರೂ, ಅವರನ್ನು ಕಾಂಗ್ರೆಸ್ ಹೈಕಮಾಂಡ್ ಗುರುತಿಸುವಂತಾಗಿದ್ದಕ್ಕೆ ಮತ್ತು ದೆಹಲಿ ರಾಜಕೀಯವು ಕೈಬೀಸಿ ಕರೆದಿದ್ದಕ್ಕೆ ಮೊರಾರ್ಜಿಗೆ ಚಪ್ಪಲಿ ತೂರಿದ ವಿವಾದದಿಂದ ಅವರಿಗೆ ದೊರೆತ ಪ್ರಚಾರವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಕಲ್ಮಾಡಿಗೆ ಚಪ್ಪಲಿ ಎಸೆದ ಕಪಿಲ್ ಠಾಕೂರ್ ಮಧ್ಯಪ್ರದೇಶದ ವಕೀಲನಾಗಿದ್ದು, ಭ್ರಷ್ಟಾಚಾರದ ವಿರುದ್ಧ ಆಕ್ರೋಶದಿಂದ ಈ ರೀತಿ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಮತ್ತು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಸ್ವತಃ ಕಲ್ಮಾಡಿ ಅವರೇ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಕಾರಿನ ಮೇಲೆ ಚಪ್ಪಲಿ ತೂರಿದ್ದ ಘಟನೆ ತನಗೆ ಪ್ರೇರಣೆಯಾಯಿತು ಎಂದು ತಿಳಿಸಿದ್ದಾನೆ! ಇತಿಹಾಸ ಮರುಕಳಿಸುತ್ತದೆ ಅಲ್ಲವೇ?