ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬ್ಲ್ಯಾಕ್ ಮನಿ-ಜೂನ್ 4ರಿಂದ ಆಮರಣಾಂತ ಉಪವಾಸ: ಬಾಬಾ (Delhi, Baba Ramdev,Launch Satyagraha, Black money)
PTI
ಸ್ವಿಸ್‌ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟಿರುವವರ ಭಾರತೀಯರ ಹೆಸರನ್ನು ಕೂಡಲೇ ಬಹಿರಂಗಪಡಿಸಬೇಕು, ಕಪ್ಪ ಹಣವನ್ನು ಕೂಡಲೇ ದೇಶಕ್ಕೆ ಮರಳಿ ತರಬೇಕು ಮತ್ತು ಅಧಿಕ ಮೊತ್ತದ ಕರೆನ್ಸಿ ನೋಟುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜೂನ್‌ 4ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಯೋಗ ಗುರು ಬಾಬಾ ರಾಮದೇವ್‌ ಘೋಷಿದ್ದಾರೆ.

ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರಾಮ್‌ದೇವ್‌ ಸುದ್ದಿಗಾರರಿಗೆ ತಿಳಿಸಿದರು.

ತಮ್ಮನ್ನು ಬೆಂಬಲಿಸಿ ರಾಷ್ಟ್ರಾದ್ಯಂತ ಇರುವ ಅವರ ಭಕ್ತರೂ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದರು. ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವುದು ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಕೇಂದ್ರ ಸರಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಬಾಬಾ ಆಪಾದಿಸಿದರು.

ಲೋಕಪಾಲ ಮಸೂದೆ ಆಗಸ್ಟ್‌ 2011ರಲ್ಲಿ ಜಾರಿಗೆ ಬರಲಿದ್ದು, ಲೋಕಪಾಲ ಸಮಿತಿ ಭ್ರಷ್ಟರು ಇಟ್ಟಿರುವ ಹಣವನ್ನು ವಶಪಡಿಸಿಕೊಳ್ಳುವುದು ಹಾಗೂ ಅವರಿಗೆ ಮರಣದಂಡನೆ ನೀಡುವ ಅಧಿಕಾರ ನೀಡಬೇಕು ಎಂದರು.

ಭಾರತೀಯರು ವಿದೇಶದಲ್ಲಿ ಅಕ್ರಮವಾಗಿಟ್ಟಿರುವ ಸಂಪತ್ತನ್ನು ಬಹಿರಂಗಪಡಿಸಬೇಕು, ವಿಶ್ವಸಂಸ್ಥೆ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ 1000 ಹಾಗೂ 500 ರೂ. ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಪಡಿಸುವಂತೆ ನೀಡಿದ್ದ ಸಲಹೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.

ತಮ್ಮೊಂದಿಗೆ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಸಮಾಜ ಸೇವಾ ಕಾರ್ಯಕರ್ತ ಅಣ್ಣ ಹಜಾರೆ, ನಿವೃತ್ತ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಹಾಗೂ ಕರ್ನಾಟಕ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರನ್ನು ಆಹ್ವಾನಿಸಿರುವುದಾಗಿ ಬಾಬಾ ತಿಳಿಸಿದರು.

ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಲ್ಲಿ ಹಿರಿಯ ವಕೀಲ ಶಾಂತಿಭೂಷಣ್‌ ಹಾಗೂ ಅವರ ಪುತ್ರ ಪ್ರಶಾಂತ್‌ ಭೂಷಣ್‌ ಅವರು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಬಾಬಾ, ಅವರನ್ನು ತಾವು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿಲ್ಲ ಎಂದರು.

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಸುಲಭವಲ್ಲ, ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿರುವ ಪ್ರತಿಯೊಬ್ಬರ ವಿರುದ್ಧವೂ ಬೆರಳು ತೋರಿಸಲಾಗುತ್ತಿದೆ ಎಂದು ಬಾಬಾ ಆಪಾದಿಸಿದರು. ಭ್ರಷ್ಟಾಚಾರ ಕುರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾವು ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.

ಹಜಾರೆ ಅವರ ಹೋರಾಟದಿಂದ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದೇಕೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮದೇವ್‌, ಅಣ್ಣಾ ಅವರ ಹೋರಾಟ ಕೇವಲ ಲೋಕಪಾಲ ಮಸೂದೆ ಜಾರಿಗಾಗಿ ಮಾತ್ರ ನಡೆಸಿದ್ದರು. ಆದರೆ ನಮ್ಮದು ಮುಂದಿನ ಮಟ್ಟದ ಹೋರಾಟವಾಗಿದೆ, ಇದು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.
ಇವನ್ನೂ ಓದಿ