ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮರ್ ಸಿಂಗ್ ಫೋನ್ ಸಂಭಾಷಣೆ ಬಹಿರಂಗಕ್ಕೆ ಕೋರ್ಟ್ ಅಸ್ತು
(Supreme Court | Amar Singh | Phone conversation | Prashant Bhushan)
ಅಮರ್ ಸಿಂಗ್ ಫೋನ್ ಸಂಭಾಷಣೆ ಬಹಿರಂಗಕ್ಕೆ ಕೋರ್ಟ್ ಅಸ್ತು
ನವದೆಹಲಿ: , ಬುಧವಾರ, 11 ಮೇ 2011( 13:30 IST )
ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಅವರ ಕದ್ದಾಲಿಸಲಾದ ದೂರವಾಣಿ ಸಂಭಾಷಣೆಯನ್ನು ಮಾಧ್ಯಮಗಳು ಬಹಿರಂಗಪಡಿಸುವುದಕ್ಕೆ 2006ರಲ್ಲಿ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತೆರವುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಎ.ಕೆ.ಗಂಗೂಲಿ ಅವರನ್ನೊಳಗೊಂಡ ಪೀಠವು, ಅಮರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನೂ ವಾಜಾಗೊಳಿಸಿ, ಮಾಧ್ಯಮಗಳಿಗೆ ವಿಧಿಸಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ತಮ್ಮ ದೂರವಾಣಿ ಮಾತುಕತೆಗಳನ್ನು ಕದ್ದಾಲಿಸಲಾಗಿದ್ದು, ಇವುಗಳೆಲ್ಲವೂ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು 2006ರಲ್ಲಿ ನ್ಯಾಯಾಲಯದ ಮೊರೆ ಹೋಗಿ, ಮಾಧ್ಯಮಗಳು ಅವುಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ವಿಧಿಸಬೇಕೆಂದು ಕೋರಿಕೊಂಡಿದ್ದರು.
ಆದರೆ, ಸಾರ್ವಜನಿಕ ವ್ಯಕ್ತಿಗಳು ತಮ್ಮ ಹೊಣೆಗಾರಿಕೆಗಳನ್ನು ನಿರ್ವಹಿಸುವ ಸಂದರ್ಭ ಅವರು ಯಾವೆಲ್ಲಾ ಅಕ್ರಮ ವ್ಯವಹಾರ ಮಾಡುತ್ತಾರೆ ಎಂಬುದನ್ನು ತಿಳಿಯುವ ಹಕ್ಕು ಜನರಿಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕೇಂದ್ರವು, ತನ್ನ ವಕೀಲರಾದ ಪ್ರಶಾಂತ್ ಭೂಷಣ್ ಮೂಲಕ ವಾದ ಮಂಡಿಸಿತ್ತು.
ಕೇಸೊಂದರಲ್ಲಿ ನ್ಯಾಯಾಧೀಶರಿಗೆ ಆಮಿಷವೊಡ್ಡುವ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ಬಹಿರಂಗಗೊಂಡಿದ್ದು, ಭ್ರಷ್ಟರನ್ನು ಮಟ್ಟ ಹಾಕಲು ರೂಪಿಸಿರುವ ಜನ ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿರುವ ವಕೀಲ ಪ್ರಶಾಂತ್ ಭೂಷಣ್ ಮತ್ತು ರಾಜಕಾರಣಿ ಅಮರ್ ಸಿಂಗ್ ನಡುವೆ ಇತ್ತೀಚೆಗೆ ವಾಕ್ಸಮರ ನಡೆದಿರುವುದು ಇಲ್ಲಿ ಉಲ್ಲೇಖಾರ್ಹ.