ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುದುಚೇರಿ: ಕಾಂಗ್ರೆಸ್ ಸರ್ಕಾರ ಕಿತ್ತೆಸೆದ ಮಾಜಿ ಕಾಂಗ್ರೆಸಿಗ! (Election Result 2011 | Puducherry | Rangaswamy | Vaithilingam | Congress)
ತಮ್ಮ ಸರಳ ಜೀವನಶೈಲಿಗಾಗಿ 'ಜೂನಿಯರ್ ಕಾಮರಾಜ್' ಎಂದೇ ಕರೆಯಲ್ಪಡುತ್ತಿರುವ ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ, ತಮ್ಮನ್ನು ಏಕಾಏಕಿ ಮುಖ್ಯಮಂತ್ರಿ ಪಟ್ಟದಿಂದ ಕಿತ್ತು ಹಾಕಿದ ಕಾಂಗ್ರೆಸ್ ಮೇಲೆ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಅವಮಾನಿತರಾಗಿ ತಮ್ಮದೇ ಪಕ್ಷ ಎನ್.ಆರ್.ಕಾಂಗ್ರೆಸ್ ಸ್ಥಾಪಿಸಿದ ಅವರು ಎಐಎಡಿಎಂಕೆ ಜೊತೆಗೆ ಸೇರಿಕೊಂಡು ಪುದುಚೇರಿಯಲ್ಲಿ ಈಗ ಸರಕಾರ ಸ್ಥಾಪನೆಗೆ ಹೊರಟಿದ್ದಾರೆ.

ರಂಗಸ್ವಾಮಿ ಸ್ಥಾಪಿಸಿದ ಅಖಿಲ ಭಾರತ ಎನ್ಆರ್ ಕಾಂಗ್ರೆಸ್-ಎಐಎಡಿಎಂಕೆ ಮೈತ್ರಿಕೂಟವು ಶುಕ್ರವಾರದ ಫಲಿತಾಂಶದಲ್ಲಿ ರಾಜ್ಯದ 30ರಲ್ಲಿ 20 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ರಂಗಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಇಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವು ಕೇವಲ 10 ಸ್ಥಾನ ಪಡೆದುಕೊಳ್ಳುವಲ್ಲಿ ಶಕ್ತವಾಗಿ, ಅಧಿಕಾರ ಕಳೆದುಕೊಂಡಿದೆ.

ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಕಾರಿಗಿಂತಲೂ ಬೈಕಿನಲ್ಲಿ ಹೋಗುವುದನ್ನೇ ಇಷ್ಟಪಡುವ ರಂಗಸ್ವಾಮಿ ಅವಿವಾಹಿತ ಮತ್ತು ಸ್ವಚ್ಛ ಚಾರಿತ್ರ್ಯದ ರಾಜಕಾರಣಿ. ಏಳು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳಿಗೆ ಉಚಿತ ಉಪಾಹಾರ ಯೋಜನೆ, ಮನೆ ಕಟ್ಟಲು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದು ಜನಪ್ರಿಯರಾಗಿದ್ದರು. ಆದರೆ, ಟೀಕಾಕಾರರಿಂದ ಅವರು ಪ್ರತಿನಿಧಿಸುತ್ತಿದ್ದ 'ತಾತನಚಾವಡಿ ಮುಖ್ಯಮಂತ್ರಿ' ಎಂದೇ ಕರೆಯಲ್ಪಡುತ್ತಿದ್ದ ಅವರ ವಿರುದ್ಧ ಅವರ ಇಡೀ ಸಂಪುಟವೇ ಸಿಡಿದೆದ್ದು ನಿಂತ ಪರಿಣಾಮವಾಗಿ, ಎರಡು ವರ್ಷಗಳ ಹಿಂದೆ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿ ವಿ.ವೈತ್ತಿಲಿಂಗಂ ಅವರನ್ನು ನೇಮಿಸಿತ್ತು.

ಅಂದಿನಿಂದ ಮೂಲೆಗುಂಪಾದ ಮೂಲತಃ ವಕೀಲರಾಗಿದ್ದ ಅವರು, ಅಭ್ಯರ್ಥಿಗಳ ಆಯ್ಕೆಯಲ್ಲಾದರೂ ಕಾಂಗ್ರೆಸ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೋ ಎಂದು ಕಾದರು. ಯಾವುದೇ ಸೂಚನೆ ದೊರೆಯದಿದ್ದಾಗ ತಮ್ಮದೇ ಪಕ್ಷ ಕಟ್ಟಿದರು. ತಾತನಚಾವಡಿ ಕ್ಷೇತ್ರವನ್ನು ಎರಡಾಗಿ ವಿಭಾಗಿಸಲಾಗಿದ್ದು, ಇಂದಿರಾನಗರ ಮತ್ತು ಕದೀರ್‌ಕಮಾಮ್ ಎಂಬ ಎರಡೂ ಕ್ಷೇತ್ರಗಳಲ್ಲಿ ಅವರು ಚುನಾವಣೆಗೆ ನಿಂತು ಜಯ ಸಾಧಿಸಿದ್ದಾರೆ.

ಚುನಾವಣೆ ಘೋಷಣೆಯಾದ ಸಂದರ್ಭದಲ್ಲಷ್ಟೇ ಹೊಸ ಪಕ್ಷ ಸ್ಥಾಪಿಸಿದ್ದ ರಂಗಸ್ವಾಮಿ, ಚೊಚ್ಚಲ ಪ್ರಯತ್ನದಲ್ಲೇ ಅದ್ಭುತ ಯಶಸ್ಸು ದಾಖಲಿಸಿದ್ದು ವಿಶೇಷ.
ಇವನ್ನೂ ಓದಿ