ಸುಮಾರು ಎಂಟು ತಿಂಗಳ ಮೌನದ ಬಳಿಕ ರಾಜಧಾನಿಯಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿಸಿದೆ. ದೆಹಲಿ ಹೈಕೋರ್ಟ್ ಎದುರು ಬುಧವಾರ ಸಂಜೆ ಕಡಿಮೆ ತೀವ್ರತೆಯ ಕಾರು ಬಾಂಬ್ ಸ್ಫೋಟವೊಂದು ಸಂಭವಿಸಿದ್ದು, ಒಸಾಮಾ ಬಿನ್ ಲಾಡೆನ್ ಹತ್ಯೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳು ಭಾರತದಲ್ಲಿಯೂ ವಿಧ್ವಂಸಕ ಚಟುವಟಿಕೆ ನಡೆಸಲು ಆರಂಭಿಸಿದರೇ ಎಂಬುದು ಆತಂಕಕ್ಕೆ ಕಾರಣವಾಯಿತು.
ಸ್ಫೋಟದಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೆ, ದೆಹಲಿ ಪೊಲೀಸರು ನಗರದಲ್ಲಿ ಕಟ್ಟೆಚ್ಚರ ಘೋಷಿಸಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಮಾರುಕಟ್ಟೆಯಂತಹಾ ಜನಸಂದಣಿ ಇರುವ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿದ್ದಾರೆ.
ಗೇಟ್ ಸಂಖ್ಯೆ 7ರಲ್ಲಿ, ಹೈಕೋರ್ಟ್ ವಕೀಲರೊಬ್ಬರ ಕಾರಿನ ಪಕ್ಕ ಬಿಳಿ ಪಾಲಿಥೀನ್ ಚೀಲದಲ್ಲಿ ಇರಿಸಲಾಗಿದ್ದ ಸ್ಫೋಟಕವು ಮಧ್ಯಾಹ್ನ ಸ್ಫೋಟಿಸಿತ್ತು. ಇದು ಅಲ್ಲಿದ್ದವರಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಈ ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ತನಿಖೆ ಆರಂಭಿಸಿದ್ದಾರೆ.
ಇದು ಆಕಸ್ಮಿಕ ಸ್ಫೋಟ ಅಲ್ಲ. ಕಾರಿನ ಬಲ ಭಾಗದಲ್ಲಿ ಪಾಲಿಥೀನ್ ಚೀಲದಲ್ಲಿ ಇರಿಸಲಾಗಿದ್ದ ಸ್ಫೋಟಕವು ಸ್ಫೋಟಗೊಂಡಿದೆ. ಕಾರಿಗೆ ಒಂದಿಷ್ಟು ಹಾನಿಯಾಗಿದೆ, ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪೊಲೀಸ್ ವಿಶೇಷ ಆಯುಕ್ತ ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಇದು ಎರಡನೆಯ ಸ್ಫೋಟ. ಕಳೆದ ವರ್ಷದ ಸೆ.19ರಂದು ಜಾಮಾ ಮಸೀದಿ ಬಳಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿತ್ತು. ಕಾಮನ್ವೆಲ್ತ್ ಗೇಮ್ಸ್‌ಗೆ ಕೆಲವೇ ದಿನಗಳ ಮೊದಲು ತೈವಾನ್ ಮಾಧ್ಯಮಗಳ ಸಿಬ್ಬಂದಿಯತ್ತ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ ಸಂದರ್ಭದಲ್ಲಿ ಈ ಸ್ಫೋಟ ನಡೆದಿತ್ತು.