ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೋರಾಟಕ್ಕೆ ಅಡ್ಡಿ-ಸಿಂಗ್, ಸೋನಿಯಾ ಕ್ಷಮೆಯಾಚಿಸ್ಲಿ: ಗಡ್ಕರಿ (Ramdev | Ramalila | Hunger strike | Arrest | BJP | Gadkari)
PR
ಭ್ರಷ್ಟಾಚಾರದ ವಿರುದ್ಧ ಮತ್ತು ಕಪ್ಪು ಹಣ ವಾಪಸಾತಿಗೆ ಆಗ್ರಹಿಸಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗಗುರು ಬಾಬಾ ರಾಮದೇವ್ ಅವರನ್ನು ಬಂಧಿಸಿರುವ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿರುವ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಉಪವಾಸ ನಿರತ ಬಾಬಾ ಬಂಧನ ಮತ್ತು ಬೆಂಬಲಿಗರ ಮೇಲೆ ಲಾಠಿಚಾರ್ಜ್ ಮಾಡಿರುವ ಕೇಂದ್ರ ಮತ್ತು ದೆಹಲಿ ಸರಕಾರದ ಕ್ರಮದ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಆದರೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಈ ಘಟನೆಯನ್ನು ವಿರೋಧಿಸಿ ದೇಶವ್ಯಾಪಿ ಒಂದು ದಿನದ ಸತ್ಯಾಗ್ರಹ ನಡೆಸುವುದಾಗಿ ಗಡ್ಕರಿ ಈ ಸಂದರ್ಭದಲ್ಲಿ ಘೋಷಿಸಿದರು. ರಾಜಘಾಟ್‌ ಸೇರಿದಂತೆ ದೇಶಾದ್ಯಂತ ಬಿಜೆಪಿ ಈ ಸತ್ಯಾಗ್ರಹ ನಡೆಸಲಿದೆ. ಒಂದು ವೇಳೆ ನಮಗೂ ಅನುಮತಿ ನೀಡದಿದ್ದಲ್ಲಿ ನಾವು ಸತ್ಯಾಗ್ರಹ ನಡೆಸಿಯೇ ಸಿದ್ದ. ಸರಕಾರ ಯಾವ ಕ್ರಮ ಬೇಕಾದರೂ ಕೈಗೊಳ್ಳಲಿ ಎಂದರು.

ರಾಮಲೀಲಾ ಮೈದಾನದಲ್ಲಿ ಉಪವಾಸ ನಿರತ ಬಾಬಾ ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲೆ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಘಟನೆಯನ್ನು ನೆನಪಿಗೆ ತರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯೋಗ ಗುರು ಬಾಬಾ ಅವರ ಪ್ರತಿಭಟನೆಯನ್ನು ಹತ್ತಿಕ್ಕಿರುವ ಕೇಂದ್ರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಪಕ್ಷಬೇಧ ಮರೆತು ಎಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡು ವಿರೋಧಿಸಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಸರಕಾರದ ಕ್ರಮದಿಂದ ಪ್ರಜಾಪ್ರಭುತ್ವಕ್ಕೆ ಅಪಚಾರ ಎಂದರು. ಸದ್ಯದ ಸ್ಥಿತಿ ನೋಡಿದರೆ ದೇಶದಲ್ಲಿ ಮತ್ತೊಮ್ಮೆ ತುರ್ತುಪರಿಸ್ಥಿತಿ ಜಾರಿಯಾಗುವ ಲಕ್ಷಣ ಗೋಚರಿಸುತ್ತಿರುವುದಾಗಿಯೂ ಹೇಳಿದರು.
ಇವನ್ನೂ ಓದಿ