ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಕೇಂದ್ರಕ್ಕೆ ಇಷ್ಟವಿಲ್ಲ ಎಂದು ವಾಗ್ದಾಳಿ ನಡೆಸಿರುವ ಗಾಂಧೀವಾದಿ ಅಣ್ಣಾ ಹಜಾರೆ, ಲೋಕಪಾಲ ಮಸೂದೆಯ ಎರಡು ಕರಡುಗಳನ್ನು ರಚಿಸುವುದಾದರೆ ಜಂಟಿ ಸಮಿತಿಯನ್ನೇಕೆ ರಚಿಸಬೇಕಿತ್ತು? ಇದು ಸರಕಾರದ ತಂತ್ರಗಾರಿಕೆ ಎಂಬುದು ಜನರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ. ಅದೇ ರೀತಿ, ಲೋಕಪಾಲ ಮಸೂದೆಯನ್ನು ಅಂಗೀಕರಿಸದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರಕ್ಕೆ ಗುರುವಾರ ಎಚ್ಚರಿಕೆಯನ್ನೂ ನೀಡಿದ್ದಾರೆ.
ಭ್ರಷ್ಟಾಚಾರ-ಮುಕ್ತ ಭಾರತವು ಸರಕಾರಕ್ಕೆ ಬೇಕಿಲ್ಲ. ನಾವು ಸಮಾಜಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇವೆ' ಎಂದು 74 ವರ್ಷದ ಹಜಾರೆ ಸುದ್ದಿಗಾರರಿಗೆ ತಿಳಿಸಿದರು.
ಸಂಸತ್‌ನಲ್ಲಿ ಮಂಡಿಸಲಿರುವ ಲೋಕಪಾಲ ಮಸೂದೆ ಕರಡು ರಚನೆ ಕುರಿತು ನಾಗರಿಕ ಸಮಿತಿ ಹಾಗೂ ಸರಕಾರದ ಪ್ರತಿನಿಧಿಗಳ ನಡುವೆ ತಿಕ್ಕಾಟ ಏರ್ಪಟ್ಟಿದ್ದು, ನಾಗರಿಕ ಸಮಿತಿ ಸದಸ್ಯರ ಬೇಡಿಕೆಗಳಿಗೆ ಸರಕಾರದ ಪ್ರತಿನಿಧಿಗಳು ಒಪ್ಪುತ್ತಿಲ್ಲ. ವಿವಾದ ಪರಿಹಾರ ನಿಟ್ಟಿನಲ್ಲಿ ಈ ಬಗ್ಗೆ ಬುಧವಾರ ನಡೆದ ಜಂಟಿ ಕರಡು ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತಾದರೂ, ಸಹಮತಕ್ಕೆ ಬರಲಾಗಲಿಲ್ಲ. ಬದಲಾಗಿ, ಸಹಮತ ಮೂಡದೇ ಇದ್ದರೆ, ನಾಗರಿಕ ಸಮಿತಿಯಿಂದ ಒಂದು, ಸರಕಾರದ ಪ್ರತಿನಿಧಿಗಳ ಗುಂಪಿನಿಂದ ಇನ್ನೊಂದು - ಹೀಗೆ ಎರಡು ಕರಡು ಮಸೂದೆಗಳನ್ನು ಸಿದ್ಧಪಡಿಸಿ ಸಂಪುಟದ ಮುಂದಿಡಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹಜಾರೆ ಈ ಹೇಳಿಕೆ ನೀಡಿದ್ದಾರೆ.
'ಅವರೇನಾದರೂ ತಪ್ಪು ಮಸೂದೆಯನ್ನೇ ಜಾರಿಗೊಳಿಸಿದರೆ ನಾವು ಖಂಡಿತವಾಗಿಯೂ ಜಂತರ್ ಮಂತರ್ ಮಾದರಿಯಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ. ಸರಕಾರವು ತನ್ನ ಬದ್ಧತೆಯಿಂದ ನುಣುಚಿಕೊಳ್ಳುತ್ತಿದೆ' ಎಂದು ಅಣ್ಣಾ ಆಪಾದಿಸಿದ್ದಾರೆ.
ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಆಗ್ರಹಿಸಿ ಅಣ್ಣಾ ಹಜಾರೆ ಕಳೆದ ಏಪ್ರಿಲ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಪ್ರಧಾನಿ, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ಹಜಾರೆ ನಡೆಸುತ್ತಿದ್ದ ಪ್ರತಿಭಟನೆಗೆ ದೇಶಾದ್ಯಂತ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದುದನ್ನು ನೋಡಿ ಬೆದರಿದ ಕೇಂದ್ರ ಸರಕಾರವು, ಮಸೂದೆ ಕರಡು ರಚನೆಗಾಗಿ 10 ಮಂದಿ ಸದಸ್ಯರ ಸಮಿತಿಯನ್ನು ರಚಿಸಿತ್ತು. ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಈ ಜಂಟಿ ಸಮಿತಿಯಲ್ಲಿ ಐವರು ಸರಕಾರದ ಪ್ರತಿನಿಧಿಗಳು ಹಾಗೂ ಐವರು ನಾಗರಿಕ ಸಮಾಜದ ಸದಸ್ಯರು ಇದ್ದಾರೆ.
'ಲೋಕಪಾಲ ಮಸೂದೆಯ ಎರಡು ಕರಡುಗಳನ್ನು ರಚಿಸುವುದಾದರೆ ಜಂಟಿ ಸಮಿತಿಯನ್ನೇಕೆ ರಚಿಸಬೇಕಿತ್ತು ಎಂಬುದು ಜನರಿಗೆ ಅರ್ಥವಾಗುತ್ತದೆ. ಇದು ಕೇವಲ ಸರಕಾರದ ತಂತ್ರವಷ್ಟೇ. ಅವರು ಕಳೆದ ಮೂರು ತಿಂಗಳಿನಿಂದ ಸಮಯ ಹಾಳುಮಾಡಿದ್ದಾರೆ' ಎಂದು ಹಜಾರೆ ಟೀಕಿಸಿದರು.
'ಲೋಕಪಾಲ ಮಸೂದೆ ಜಾರಿಗೊಳಿಸುವುದು ಸರಕಾರಕ್ಕೆ ಇಷ್ಟವಿಲ್ಲ. ಮಸೂದೆ ಜಾರಿಯಾದರೆ ನಮಗೇನೂ ವೈಯಕ್ತಿಕವಾಗಿ ಲಾಭವಾಗುವುದಿಲ್ಲ. ಭ್ರಷ್ಟಾಚಾರವನ್ನು ನಿಗ್ರಹಿಸಲು ಪೂರಕವಾಗದ ಇಂತಹಾ ಮಸೂದೆ ಜಾರಿಗೊಳಿಸಿಯಾದರೂ ಏನು ಪ್ರಯೋಜನ' ಎಂದು ನವದೆಹಲಿಯಲ್ಲಿ ಬುಧವಾರ ಜನ್ಮದಿನ ಆಚರಿಸಿಕೊಂಡ ಹಜಾರೆ ಹೇಳಿದ್ದಾರೆ. ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು ಸರಕಾರ ಸಿದ್ಧವಿಲ್ಲ ಎಂದೂ ಹಜಾರೆ ಆಪಾದಿಸಿದ್ದಾರೆ.