ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು, ವಿಪಕ್ಷಗಳು 'ದರ ಏರಿಕೆ' ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ, ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರಿಗೆ ಹಾಗೂ ಹಾಗೂ ರಾಜ್ಯಸಭೆ ಕಲಾಪವನ್ನು 2 ಗಂಟೆಯವರೆಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನದ ಎರಡನೇ ದಿನವಾದ ಇಂದು ಸದನ ಆರಂಭವಾಗುತ್ತಿದ್ದಂತೆ, ವಿರೋಧ ಪಕ್ಷಗಳು ದರ ಏರಿಕೆ ವಿರುದ್ಧ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಕೋಲಾಹಲವೆಬ್ಬಿಸಿವೆ. ಎನ್‌ಡಿಎ ಮಿತ್ರಕೂಟಗಳು ದರ ಏರಿಕೆ ಬಗ್ಗೆ ಮತದಾನ ನಡೆಸುವಂತೆ ಸರಕಾರವನ್ನು ಒತ್ತಾಯಿಸುತ್ತಿವೆ. ಆದರೆ, ದರ ಏರಿಕೆ ಬಗ್ಗೆ ಚರ್ಚಿಸಲು ಸಿದ್ಧ. ಆದರೆ, ಮತದಾನ ಅಗತ್ಯವಿಲ್ಲ ಎಂದು ಯುಪಿಎ ಸ್ಪಷ್ಟಪಡಿಸಿದೆ.
ರಾಜ್ಯಸಭೆಯಲ್ಲಿ ಕೂಡಾ ಕೋಲಾಹಲ ಮುಂದುವರಿದಿದೆ. ದೇಶದ ಆಂತರಿಕ ಭದ್ರತೆ ಮತ್ತು ಮುಂಬೈ ಸರಣಿ ಸ್ಫೋಟ, ಭಯೋತ್ಪಾದನೆ ವಿಷಯಗಳನ್ನು ವಿರೋಧ ಪಕ್ಷಗಳು ಕೈಗೆತ್ತಿಕೊಂಡಿದ್ದು, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರಿಂದ ಕೋಲಾಹಲದ ಮಧ್ಯೆ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದೆ.
ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿಷಯ ಪ್ರಸ್ತಾಪವಾದಾಗ, 2ಜಿ ತರಂಗ ಗುಚ್ಚ ಹಗರಣದಲ್ಲಿ ಪ್ರಧಾನಿ ಮತ್ತು ಗೃಹಸಚಿವ ಪಿ.ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ ಎನ್ನಲಾಗಿದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಮುಖ ವಿರೋಧಪಕ್ಷವಾದ ಬಿಜೆಪಿ, ಸದನದಲ್ಲಿ ಹಣದುಬ್ಬರ ಮತ್ತು ಭ್ರಷ್ಟಾಚಾರ ವಿಷಯಗಳ ಬಗ್ಗೆ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.