ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ಜನಲೋಕಪಾಲ ಮಸೂದೆಗೆ ಭಾರಿ ಜನಬೆಂಬಲ ಪಡೆಯುವ ಪ್ರಯತ್ನದಲ್ಲಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಪಂಜಿನ ಮೆರವಣಿಗೆ, ಕಾರು ಮತ್ತು ದ್ವಿಚಕ್ರ ವಾಹನಗಳ ಮೆರವಣಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಜಾರೆಯವರು, 500 ಕಾರುಗಳು ಹಾಗೂ 1500 ದ್ವಿಚಕ್ರ ವಾಹನಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಏತನ್ಮಧ್ಯೆ, ಅಣ್ಣಾ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ನಮ್ಮ ಜೊತೆಯಲ್ಲಿರುತ್ತಾರೆ ಎಂದು ಆಯೋಜಕ ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ಮುಂಬೈನ ದಾದರ್‌ನಿಂದ ಆರಂಭವಾದ ಮೆರವಣಿಗೆ, ಆಜಾದ್ ಮೈದಾನದಲ್ಲಿ 11 ಗಂಟೆಗೆ ಅಂತ್ಯಗೊಳ್ಳಲಿದೆ. ಮೆರಣಿಗೆಯಲ್ಲಿ ಡಬ್ಬಾವಾಲಾಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಅಣ್ಣಾಜಿ, ಇಂದು ಸಂಜೆ ನಾಲ್ಕು ಗಂಟೆಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಆಜಾದ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ, ಜನಲೋಕಪಾಲ ಕರಡು ಸಮಿತಿ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಮೂವ್‌ಮೆಂಟ್ ವಾರ್ಷಿಕೋತ್ಸವದ ಅಂಗವಾಗಿ ಕ್ರಾಂತಿ ಮೈದಾನದಲ್ಲಿ ಪಂಜಿನ ಮೆರವಣಿಗೆ ನಡೆಸಲಿದ್ದು, ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.