ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯಾಗ್ರಹಕ್ಕೆ 22 ಷರತ್ತು: ಡೋಂಟ್ ಕೇರ್ ಎಂದ ಅಣ್ಣಾ (Anna Hazare | Lokpal Bill | UPA govt)
PTI
ಇದೆಂಥಾ ಕಾಲ ಬಂತು? ಉಪವಾಸ ಸತ್ಯಾಗ್ರಹ ಮಾಡಬೇಕಿದ್ದರೆ ಸರಕಾರದ 22 ಷರತ್ತುಗಳನ್ನು ಪಾಲಿಸಬೇಕಾ ಎಂದು ಕಿಡಿಕಾರಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, 'ಐ ಡೋಂಟ್ ಕೇರ್' ಎಂದಿದ್ದಾರಲ್ಲದೆ, ಸರಕಾರದ ಷರತ್ತುಗಳನ್ನು ತಿರಸ್ಕರಿಸಿದ್ದು, ಪೊಲೀಸರು ಏನು ಬೇಕಾದರೂ ಮಾಡಲಿ, ನಾವಂತೂ ಷರತ್ತುಗಳನ್ನು ಪಾಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಪ್ರಬಲವಾದ ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 16ರಿಂದ ಜೈಪ್ರಕಾಶ್ ನಾರಾಯಣ್ ಪಾರ್ಕ್‌ನಲ್ಲಿ ಆಮರಣ ನಿರಶನ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಪ್ರಧಾನಿಗೆ ಪತ್ರ

ದೆಹಲಿ ಪೊಲೀಸರ ಷರತ್ತು ಬದ್ಧ ಸಮ್ಮತಿ ಪತ್ರಕ್ಕೆ ತಾವು ಸಹಿ ಹಾಕುವುದಿಲ್ಲ ಎಂದು ಅಣ್ಣಾ ಹಜಾರೆ ತಂಡದ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಹಜಾರೆ ಈಗಾಗಲೇ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದನ್ವಯ ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಪರಿಹರಿಸುವ ವಿಶ್ವಾಸವಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಜಂತರ್ ಮಂತರ್‌ನಲ್ಲಿ ಆಮರಣ ನಿರಶನ ಮಾಡುವುದರಿಂದ ಇತರ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ಕೊರತೆಯಾಗುತ್ತದೆ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದರು. ನಂತರ ನಾವು ಹೊಸದಾಗಿ ನಾಲ್ಕು ಸ್ಥಳಗಳನ್ನು ಆಮರಣ ನಿರಶನಕ್ಕಾಗಿ ಸೂಚಿಸಿದ್ದೆವು. ಆದರೆ, ಯಾವುದೇ ಕಾರಣಗಳನ್ನು ನೀಡದೆ ಅವನ್ನು ತಿರಸ್ಕರಿಸಿದರು.

ಜೆಪಿ ಪಾರ್ಕ್‌ನಲ್ಲಿ ನಿರಶನ ಆರಂಭಿಸುವಂತೆ ದೆಹಲಿ ಪೊಲೀಸರು ಅನುಮತಿ ನೀಡಿದರು. ಇದೀಗ, ಜೆಪಿ ಪಾರ್ಕ್‌ನಲ್ಲಿ ಮೂರು ದಿನಗಳವರೆಗೆ ಮಾತ್ರ ಆಮರಣ ನಿರಶನ ನಡೆಸಬಹುದು ಎಂದು ಹೇಳುತ್ತಿದ್ದಾರೆ. ಇದು ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹಜಾರೆ, ಶಾಂತಿ ಭೂಷಣ್ ಸಹಿತ ಅಣ್ಣಾ ಬಳಗದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಒಡ್ಡಿದ ಷರತ್ತುಗಳೇನು?

ಜನಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ತಂಡಕ್ಕೆ ನೀಡಲಾಗಿರುವ ಆಮರಣ ನಿರಶನ ಅನುಮತಿ ಪತ್ರದಲ್ಲಿ, ದೆಹಲಿ ಪೊಲೀಸರು 22 ಷರತ್ತುಗಳನ್ನು ವಿಧಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವೆಂದರೆ:

ಉಪವಾಸವನ್ನು ಎರಡುವರೆ ದಿನಗಳ ಕಾಲ ಮಾತ್ರವೇ ಮಾಡಬೇಕು.

ಉಪವಾಸ ಸತ್ಯಾಗ್ರಹವನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ನಡೆಸತಕ್ಕದ್ದು.

ಪ್ರತಿಭಟನಾ ಸ್ಥಳದಲ್ಲಿ 4000 ದಿಂದ 5000 ಜನರಿಗೆ ಮಾತ್ರ ಸೇರಲು ಅವಕಾಶವಿದೆ.

ತಲಾ 50ಕ್ಕಿಂತ ಹೆಚ್ಚಿನ ಚತುಶ್ಚಕ್ರ ಹಾಗೂ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡಲಾಗುವುದಿಲ್ಲ.

ಪಾರ್ಕ್‌ನಲ್ಲಿರುವ ಗಿಡ ಮರಗಳನ್ನು ಹಾಳುಗೆಡಹುವಂತಿಲ್ಲ.

ಹಜಾರೆ ನಡೆಸುವ ಪ್ರತಿಭಟನಾ ಸ್ಥಳದ ವಿವಾದ ಇದೀಗ ಅಂತ್ಯಗೊಂಡಿದ್ದು, ಉಪವಾಸ ಸತ್ಯಾಗ್ರಹ ಎಷ್ಟು ದಿನಗಳ ಕಾಲ ನಡೆಯಬೇಕು ಎನ್ನುವುದು ಅಣ್ಣಾ ತಂಡಕ್ಕೆ ಮತ್ತು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.


ಏನೇ ಆದ್ರೂ ಕನಿಷ್ಠ ಒಂದು ತಿಂಗಳು ಉಪವಾಸ

ಏತನ್ಮಧ್ಯೆ, ಅಣ್ಣಾ ಹಜಾರೆ ತಂಡವು ಕನಿಷ್ಠ 30 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಉದ್ದೇಶ ಹೊಂದಿದೆ. ಪೊಲೀಸರೇ ತಮಗೆ ಸೂಚನೆ ನೀಡುವುದಾದರೆ ಈ ಸತ್ಯಾಗ್ರಹಕ್ಕೆ ಬೆಲೆ ಏನು ಬಂತು ಎಂಬುದು ಹಜಾರೆ ಬಳಗದ ಪ್ರಶ್ನೆ. ಅಲ್ಲದೆ, ಒಂದು ದುರ್ಬಲ ಕಾಯ್ದೆಯ ವಿರುದ್ಧ ಹೋರಾಟ ನಡೆಸಲು ಕೇವಲ ನಾಲ್ಕೈದು ಸಾವಿರ ಜನಕ್ಕೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಆದರೆ, ಬರುವವರ ಸಂಖ್ಯೆಯನ್ನು ನಿಯಂತ್ರಿಸುವುದಾದರೂ ಹೇಗೆ? ಎಂದೂ ಅವರು ಕೇಳುತ್ತಿದ್ದಾರೆ.

ಇದು ಪ್ರತಿಭಟನೆ ಹತ್ತಿಕ್ಕುವ ಯುಪಿಎ ಸರಕಾರದ ನೀತಿಯೇ ಎಂಬುದು ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಆತಂಕ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಲೋಕಪಾಲ್ ಮಸೂದೆ, ಯುಪಿಎ ಸರಕಾರ