ಸಿಂಗ್‌ಜೀ, ನಿಮ್ ಸರ್ಕಾರ ಪ್ರಜಾತಂತ್ರದ ಕೊಲೆ ಮಾಡ್ತಿದೆ: ಅಣ್ಣಾ
ನವದೆಹಲಿ, ಭಾನುವಾರ, 14 ಆಗಸ್ಟ್ 2011( 09:30 IST )
ಕೇಂದ್ರ ಸರಕಾರದ ಷರತ್ತುಗಳು ಹಾಗೂ ಬೇಜವಾಬ್ದಾರಿ ವರ್ತನೆಯಿಂದಾಗಿ ಬೇಸತ್ತ ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ, ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ನಿಮ್ಮ ಸರಕಾರ ಜನತೆಯ ಮೂಲಭೂತ ಹಕ್ಕುಗಳನ್ನು ದಮನ ಮಾಡಿ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದಿ ಭಾಷೆಯಲ್ಲಿ ಪತ್ರ ಬರೆದ ಅಣ್ಣಾ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರನ್ನು ನಿಮ್ಮ ಸರಕಾರ ನಿರ್ದಯಿಯಾಗಿ ದಮನ ಮಾಡುತ್ತಿದೆ. ನಿಮ್ಮ ಸರಕಾರದಲ್ಲಿ ಇಂತಹ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಆಮರಣ ನಿರಶನಕ್ಕಾಗಿ ತಾವು ಸೂಚಿಸಿದ ಸ್ಥಳಗಳನ್ನು ಸೂಕ್ತ ಕಾರಣಗಳಿಲ್ಲದೇ ತಿರಸ್ಕರಿಸಲಾಗಿದೆ. ಇದು ಸರ್ವಾಧಿಕಾರಿ ಧೋರಣೆಯಲ್ಲದೇ ಮತ್ತೇನು? ಎಂದು ಕಿಡಿಕಾರಿದ್ದಾರೆ.
ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿ ಸಂವಿಧಾನವನ್ನು ಉಲ್ಲಂಘಿಸಿ ಮಾನವ ಹಕ್ಕುಗಳನ್ನು ದಮನ ಮಾಡುವುದು ನಿಮಗೆ ಶೋಭೆ ತರುತ್ತದೆಯೇ. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಅತಿ ಹೆಚ್ಚಿನ ಭ್ರಷ್ಟ ಸರಕಾರ ಎಂದು ಜನ ಹೇಳುತ್ತಿದ್ದಾರೆ. ಪ್ರತಿಯೊಂದು ಸರಕಾರ ಹಿಂದಿನ ಸರಕಾರಕ್ಕಿಂತ ಹೆಚ್ಚು ಭ್ರಷ್ಟ ಎನ್ನುವುದು ನನ್ನ ಅನಿಸಿಕೆಯಾಗಿದೆ ಎಂದು ಅಣ್ಣಾ ಪತ್ರದಲ್ಲಿ ಅಸಮಧಾನ ತೋಡಿಕೊಂಡಿದ್ದಾರೆ.
ದೆಹಲಿ ಪೊಲೀಸರು ಯಾವುದೇ ಕಾರಣಗಳನ್ನು ನೀಡದೇ, ಕೇವಲ ಮೂರು ದಿನಳವರೆಗೆ ಮಾತ್ರ ಆಮರಣ ನಿರಶನಕ್ಕಾಗಿ ಅನುಮತಿ ನೀಡುವುದಾಗಿ ಹೇಳುತ್ತಿದ್ದಾರೆ ಇದರ ಮರ್ಮವೇನು? ಎಂದು ಅಣ್ಣಾ ಹಜಾರೆ ಪ್ರಧಾನಿಗೆ ಬರೆದ ಪತ್ರದಲ್ಲಿ ಕಿಡಿಕಾರಿದ್ದಾರೆ.