ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ನಿರಶನಕ್ಕೆ ಹೆದರಿದ ಸರಕಾರ, ಇದೀಗ ಮಾತುಕತೆಗೆ ಸಿದ್ಧ (Anna Hazare | UPA govt | Lokpal Bill | India Against Corruption)
ಅಣ್ಣಾ ನಿರಶನಕ್ಕೆ ಹೆದರಿದ ಸರಕಾರ, ಇದೀಗ ಮಾತುಕತೆಗೆ ಸಿದ್ಧ
ನವದೆಹಲಿ, ಶನಿವಾರ, 20 ಆಗಸ್ಟ್ 2011( 10:59 IST )
PTI
ಸಶಕ್ತ ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ಆಮರಣ ನಿರಶನ ಆರಂಭಿಸುವುದಾಗಿ ಘೋಷಿಸಿದಾಗ ನಿರ್ಲಕ್ಷಿಸಿದ್ದ ಯುಪಿಎ ಸರಕಾರ, ಇದೀಗ, ಅಣ್ಣಾ ತಂಡ ಸೂಕ್ತ ರೀತಿಯಲ್ಲಿ ಸರಕಾರವನ್ನು ಸಂಪರ್ಕಿಸಿದಲ್ಲಿ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದೆ.
ರಾಮಲೀಲಾ ಮೈದಾನದಲ್ಲಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಆಮರಣ ನಿರಶನದಿಂದ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿದ ನಂತರ ಪ್ರಧಾನಿ ಮನಮೋಹನ್ ಸಿಂಗ್, ಅಣ್ಣಾ ಹಜಾರೆ ತಂಡದೊಂದಿಗೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಣಬ್ ಮುಖರ್ಜಿ, ಪಿ.ಚಿದಂಬರಂ ಮತ್ತು ಎಕೆ. ಅಂಟನಿ ಹಾಗೂ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಉಪಸ್ಥಿತರಿದ್ದರು.
ನಾಗರಿಕ ಸಮಿತಿ ಸದಸ್ಯರ ತಂಡ ಸರಕಾರದೊಂದಿಗೆ ಮಾತುಕತೆಗೆ ಸಿದ್ಧವಾದಲ್ಲಿ, ಸರಕಾರ ಕೂಡಾ ಅವರೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಗಾಂಧಿವಾದಿ ಅಣ್ಣಾ ಹಜಾರೆ, ಆಗಸ್ಟ್ 30ರೊಳಗೆ ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸದಿದ್ದಲ್ಲಿ, ಕೊನೆಯ ಉಸಿರುವವರೆಗೂ ಆಮರಣ ನಿರಶನ ಕೈಗೊಳ್ಳುವುದಾಗಿ ಗಡುವು ನೀಡಿದ್ದರಿಂದ, ಸರಕಾರ ಕೂಡಲೇ ಹಜಾರೆ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ.
ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ, ಲೋಕಪಾಲ ಮಸೂದೆಯಲ್ಲಿ ಪ್ರಧಾನಮಂತ್ರಿ, ನ್ಯಾಯಾಂಗ ಮತ್ತು ಸಂಸತ್ತಿನಲ್ಲಿನ ಸಂಸದರ ನಡುವಳಿಕೆಗಳನ್ನು ಲೋಕಪಾಲ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದೆ.