ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ನಿರ್ಣಯ ಅಂಗೀಕಾರ: ಅಣ್ಣಾ ಹಜಾರೆ ನಿರಶನ ನಾಳೆ ಅಂತ್ಯ (Lok Sabha | Lokpal bill | Anna Hazare | Pranab Mukherjee)
ಲೋಕಪಾಲ ನಿರ್ಣಯ ಅಂಗೀಕಾರ: ಅಣ್ಣಾ ಹಜಾರೆ ನಿರಶನ ನಾಳೆ ಅಂತ್ಯ
ನವದೆಹಲಿ, ಶನಿವಾರ, 27 ಆಗಸ್ಟ್ 2011( 20:35 IST )
PTI
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಮೂರು ಷರತ್ತುಗಳಿಗೆ ಲೋಕಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಲೋಕಸಭೆಯ ಮೂಲಗಳು ತಿಳಿಸಿವೆ.
ಸಶಕ್ತ ಜನಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿಯ ಮೂರು ಷರತ್ತುಗಳ ಬಗ್ಗೆ ಲೋಕಸಭೆಯಲ್ಲಿ ನಿರ್ಣಯವನ್ನು ಸ್ವೀಕರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿಲ ಪವನ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.
ಅಣ್ಣಾ ಹಜಾರೆಯವರ ಮೂರು ಷರತ್ತುಗಳಾದ ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆ ಚರ್ಚೆ, ತಳಮಟ್ಟದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೊಳಪಡಿಸಿ ಮತ್ತು ಎಲ್ಲಾ ರಾಜ್ಯಗಳಲ್ಲಿ ಲೋಕಪಾಲರಷ್ಟೆ ಸ್ವಾತಂತ್ರ್ಯವುಳ್ಳ ಲೋಕಾಯುಕ್ತರನ್ನು ನೇಮಕ ಮಾಡಿ ಹಾಗೂ ನಾಗರಿಕರ ಸನ್ನದು ಜಾರಿ ನಿರ್ಣಯಗಳನ್ನು ಸದನದಲ್ಲಿ ಅಂಗೀಕರಿಸಲಾಗಿದೆ.
ಲೋಕಪಾಲ ಮಸೂದೆ ಕುರಿತಂತೆ ನಡೆದ ದೀರ್ಘಾವಧಿ ಚರ್ಚೆಯ ನಂತರ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಣ್ಣಾ ತಂಡದ ಬೇಡಿಕೆಯಾದ ಮತದಾನ ಬೇಡಿಕೆಗೆ ಕೇಂದ್ರ ಸರಕಾರ ಆರಂಭದಲ್ಲಿ ಸಮ್ಮತಿ ಸೂಚಿಸಿರಲಿಲ್ಲ. ಕೇವಲ ಚರ್ಚೆ ಮಾತ್ರ ಮಾಡುವುದಾಗಿ ಹೇಳಿಕೆ ನೀಡಿತ್ತು. ಆದರೆ, ಅಣ್ಣಾ ಹಜಾರೆಯವರ ಕಠಿಣ ನಿಲುವು ಸರಕಾರ ನಿರ್ಣಯ ಅಂಗೀಕಾರ ಮಾಡುವಂತೆ ಒತ್ತಡ ಹೇರಿತು.
ಲೋಕಸಭೆಯಲ್ಲಿ ನಿರ್ಣಯಯಗಳನ್ನು ಅಂಗೀಕರಿಸುವಾಗ ಸದಸ್ಯರಲ್ಲಿ ಭಿನ್ನಾಬಿಪ್ರಾಯಗಳಿದ್ದಲ್ಲಿ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಅವಿರೋಧವಾಗಿ ನಿರ್ಣಯ ಅಂಗೀಕರಿಸುವ ಸಂದರ್ಭದಲ್ಲಿ ಮೇಜು ತಟ್ಟಿ ಕೂಡಾ ಸ್ವೀಕರಿಸಬಹುದಾಗಿದೆ ಎಂದು ಹರೀಷ್ ಸಾಳ್ವೆ ತಿಳಿಸಿದ್ದಾರೆ.