ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಶಕ್ತಿಗೆ ಜಯ: ಎಳನೀರು ಕುಡಿದು ಅಣ್ಣಾ ಹಜಾರೆ ನಿರಶನ ಅಂತ್ಯ (Anna Hazare | Ramlila Maidan | Lokpal Bill | Parliament | Congress | UPA)
ಜನಶಕ್ತಿಗೆ ಜಯ: ಎಳನೀರು ಕುಡಿದು ಅಣ್ಣಾ ಹಜಾರೆ ನಿರಶನ ಅಂತ್ಯ
ನವದೆಹಲಿ, ಭಾನುವಾರ, 28 ಆಗಸ್ಟ್ 2011( 16:51 IST )
PR
ಕಳೆದ 12 ದಿನಗಳಿಂದ ಯುಪಿಎ ಸರ್ಕಾರ ಮತ್ತು ಅಣ್ಣಾ ಹಜಾರೆ ನಡುವೆ ಸಮರಕ್ಕೆ ಕಾರಣವಾಗಿದ್ದ ಜನಲೋಕಪಾಲ ಮಸೂದೆಯ 3 ವಿವಾದಾತ್ಮಕ ಅಂಶಗಳಿಗೆ ಸಂಸತ್ತಿನ ಉಭಯ ಸದನಗಳು ಶನಿವಾರ ರಾತ್ರಿ ತಾತ್ವಿಕವಾಗಿ ಒಪ್ಪಿ ನಿರ್ಣಯ ಅಂಗೀಕರಿಸಿರುವ ಮೂಲಕ ಗಾಂಧಿವಾದಿ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 10-20ಕ್ಕೆ ರಾಮಲೀಲಾ ಮೈದಾನದಲ್ಲಿ ಅಣ್ಣಾ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ದೆಹಲಿಯ ಸುಂದರ್ ನಗರದ ದಲಿತ ಕುಟುಂಬದ ಸಿಮ್ರನ್ ಎಂಬ ಐದರ ಹರೆಯದ ಬಾಲಕಿ ಹಾಗೂ ಸಿಕ್ರಾ ಸೇರಿದಂತೆ ಕೆಲವು ಚಿಣ್ಣರು ಅಣ್ಣಾ ಹಜಾರೆಯವರಿಗೆ ಎಳನೀರು ಕುಡಿಸುವ ಮೂಲಕ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಉಪವಾಸ ಅಂತ್ಯಗೊಳಿಸಿರುವ ಅಣ್ಣಾ ಹಜಾರೆಯವರು ರಾಜಘಾಟ್‌ಗೆ ತೆರಳಿ ಮಹಾತ್ಮಾಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ನಂತರ ಗುರ್‌ಗಾಂವ್‌ನ ಆಸ್ಪತ್ರೆಯಲ್ಲಿ ಅಣ್ಣಾ ಅವರ ಆರೋಗ್ಯ ತಪಾಸಣೆ ನಡೆಯಲಿದೆ.
ಕಳೆದ (ಆಗಸ್ಟ್ 16) 12 ದಿನಗಳಿಂದ ಉಪವಾಸ ಕುಳಿತಿದ್ದ ಅಣ್ಣಾ ಹಜಾರೆ ದೇಹಸ್ಥಿತಿ ಕ್ರಮೇಣ ಗಂಭೀರವಾಗುತ್ತಿತ್ತು. ಹದಿಮೂರು ದಿನಕ್ಕೆ 7.5ಕೆಜಿಯಷ್ಟು ತೂಕ ಕಳೆದುಕೊಂಡಿದ್ದರು. ಅವರು ಉಪವಾಸ ಕೈಬಿಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ದೇಶದ ನಾನಾ ಗಣ್ಯರು ಅವರಲ್ಲಿ ವಿನಂತಿ ಮಾಡಿದ್ದರು. ಆದರೆ ತಮ್ಮ ಬೇಡಿಕೆ ಈಡೇರುವವರೆಗೂ ನಿರಶನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.
ಲೋಕಪಾಲದಂತೆ ರಾಜ್ಯಗಳಲ್ಲೂ ಲೋಕಾಯುಕ್ತ ಸಂಸ್ಥೆ ಸ್ಥಾಪನೆ, ಪ್ರತಿ ಇಲಾಖೆಯ ಪ್ರತಿ ಕೆಲಸಕ್ಕೂ ಕಾಲಮಿತಿ ನಿಗದಿ ಹಾಗೂ ಕೆಳ ಹಂತದ ಅಧಿಕಾರಶಾಹಿಯನ್ನು ಲೋಕಾಪಾಲ ವ್ಯಾಪ್ತಿಗೆ ಒಳಪಡಿಸಬೇಕೆಂಬ ಅಣ್ಣಾ ತಂಡದ ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ನೀಡಬಹುದು ಎಂದು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಪ್ರಸ್ತಾವನೆಯನ್ನು ಉಭಯ ಸದನಗಳು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಆನಂತರ ಮಸೂದೆಯನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಕಳುಹಿಸಲಾಯಿತು.
ಸಂಸತ್ತಿನ ಉಭಯ ಸದನಗಳ ತೀರ್ಮಾನದೊಂದಿಗೆ ಪ್ರಧಾನಿ ಅಣ್ಣಾ ಹಜಾರೆ ಅವರಿಗೆ ಬರೆದ ಪತ್ರವನ್ನು ಕೇಂದ್ರ ಸಚಿವ ವಿಲಾಸ್ ರಾವ್ ದೇಶ್‌ಮುಖ್ ಶನಿವಾರ ರಾತ್ರಿ ರಾಮಲೀಲಾ ಮೈದಾನದಲ್ಲಿ ನಿರಶನ ನಡೆಸುತ್ತಿದ್ದ ಅಣ್ಣಾ ಅವರಿಗೆ ತಲುಪಿಸಿದರು. ಈ ಸಂದರ್ಭದಲ್ಲಿ ಉಪವಾಸ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು.
ಭ್ರಷ್ಟಾಚಾರ ತಡೆಗಾಗಿ ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ ಕೈಗೊಂಡ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೇ ದೇಶ-ವಿದೇಶ ಮಾಧ್ಯಮಗಳು ಕೂಡ ಈ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ್ದವು. ಶಾಲಾ ಮಕ್ಕಳು, ಹಿರಿಯ, ವಿವಿಧ ಸಂಘಟನೆಗಳು ಬೀದಿಗಿಳಿದು ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಒಟ್ಟಿನಲ್ಲಿ ಆಡಳಿತಾರೂಢ ಕೇಂದ್ರ ಯುಪಿಎ ಸರ್ಕಾರ ಅಣ್ಣಾ ಬೇಡಿಕೆಗೆ ಸ್ಪಂದಿಸುವ ಮೂಲಕ ಜನಶಕ್ತಿಗೆ ಜಯ ದೊರಕಿದಂತಾಗಿದೆ.
ಕೊನೆಗೂ ಸರ್ಕಾರ ಒಪ್ಪಿದ 3 ಬೇಡಿಕೆಗಳು: *ಕೆಳಹಂತದ ಅಧಿಕಾರಶಾಹಿಯನ್ನೂ ಲೋಕಪಾಲರ ವ್ಯಾಪ್ತಿಗೆ ತರುವುದು. *ಲೋಕಪಾಲ ಮಾದರಿಯಲ್ಲೇ ರಾಜ್ಯಗಳಲ್ಲೂ ಪರಿಣಾಮಕಾರಿ ಲೋಕಾಯುಕ್ತಕ್ಕೆ ಚಾಲನೆ ನೀಡುವುದು. *ಸರ್ಕಾರಿ ಇಲಾಖೆಗಳಲ್ಲಿ ಜನಸಾಮಾನ್ಯರ ಕೆಲಸಕ್ಕೆ ಕಾಲಮಿತಿ ಗಡುವು.
ದೇಶಾದ್ಯಂತ ಸಂಭ್ರಮದ ಅಲೆ: ಅಣ್ಣಾ ಹಜಾರೆ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅಣ್ಣಾ ಇಂದು ಬೆಳಿಗ್ಗೆ ನಿರಶನ ಅಂತ್ಯಗೊಳಿಸುತ್ತಿದ್ದಂತೆಯೇ ಮುಂಬೈ, ರಾಲೇಗಣ್ ಸಿದ್ಧಿ, ನವದೆಹಲಿ, ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ದೇಶಾದ್ಯಂತ ಅಣ್ಣಾ ಬೆಂಬಲಿಗರು ಇದು ಜನರ ಹೋರಾಟಕ್ಕೆ ಸಿಕ್ಕ ಜಯ ಎಂದು ಬಣ್ಣಿಸುವ ಮೂಲಕ ಸಂಭ್ರಮ ಆಚರಿಸಿದರು.