ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇದು ಪೂರ್ಣ ಜಯವಲ್ಲ,ಇನ್ನೂ ಹೋರಾಟವಿದೆ: ಅಣ್ಣಾ ಹಜಾರೆ (Anna Hazare | Lokpal Bill | Ramalila Maidan | Parliment | Fast | Anna | UPA)
ಇದು ಪೂರ್ಣ ಜಯವಲ್ಲ,ಇನ್ನೂ ಹೋರಾಟವಿದೆ: ಅಣ್ಣಾ ಹಜಾರೆ
ನವದೆಹಲಿ, ಭಾನುವಾರ, 28 ಆಗಸ್ಟ್ 2011( 11:02 IST )
PTI
ಬದಲಾವಣೆಗಾಗಿ ಹೋರಾಟ ಆರಂಭವಾಗಿದೆ ಅಷ್ಟೇ. ಆ ನಿಟ್ಟಿನಲ್ಲಿ ಇದು ಪೂರ್ಣ ಜಯವಲ್ಲ. ಜನಲೋಕಪಾಲ ಮಸೂದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರೋವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ. ಆದರೂ ಇದು ದೇಶದ ಜನರಿಗೆ ದೊರೆತ ಜಯವಾಗಿದೆ. ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ರಾಮಲೀಲಾ ಮೈದಾನದಲ್ಲಿ ಉಪವಾಸ ಅಂತ್ಯಗೊಳಿಸಿದ ಅಣ್ಣಾ ಹಜಾರೆ ನೆರೆದ ಲಕ್ಷಾಂತರ ಜನರನ್ನು ಉದ್ದೇಶಿಸಿ ಹೇಳಿದರು.
ಭಾನುವಾರ ಬೆಳಿಗ್ಗೆ ರಾಮಲೀಲಾ ಮೈದಾನದಲ್ಲಿ ಕಳೆದ ಸುಮಾರು 291ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅಣ್ಣಾ ಅವರಿಗೆ ದಲಿತ ಕುಟುಂಬದ ಬಾಲಕಿ ಸಿಮ್ರನ್ ಹಾಗೂ ಸಿಕ್ರಾ ಸೇರಿದಂತೆ ಕೆಲವು ಪುಟಾಣಿಯರು ನೀಡಿದ ದಾಳಿಂಬೆ ರಸ ಕುಡಿಯುವ ಮೂಲಕ ತಮ್ಮ ನಿರಶನ ಅಂತ್ಯಗೊಳಿಸಿದರು.
ಜ್ಯೂಸ್ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಈ ಹೋರಾಟಕ್ಕೆ ಬೆಂಬಲ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ ಮಾಧ್ಯಮಗಳಿಗೆ, ಪ್ರಧಾನಿ, ಸಂಸದರು ಹಾಗೂ ದೇಶದ ಯುವಶಕ್ತಿಗೆ ಧನ್ಯವಾದ ಅರ್ಪಿಸಿದರು.
ಲೋಕಾಪಾಲಕ್ಕೆ ದೊರೆತ ಗೆಲುವು ದೇಶದ ಜನರ ಹೋರಾಟ ಸಂದ ಜಯವಾಗಿದೆ. ನಿಮ್ಮ ಹೋರಾಟದ ಫಲ ದೇಶದ ಜನರಿಗೆ ಸಿಗಲಿದೆ. ಇದು ಕೇವಲ ಹೋರಾಟದ ಆರಂಭ ಅಷ್ಟೇ. ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕಿದೆ. ಅದಕ್ಕಾಗಿ ಮುಂದೆ ಹೋರಾಟ ನಡೆಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಭ್ರಷ್ಟಾಚಾರ ತೊಲಗಿಸಿ ಪರಿವರ್ತನೆಯತ್ತ ಹೆಜ್ಜೆ ಹಾಕಬೇಕಾಗಿದೆ. ಅದಕ್ಕಾಗಿ ಚುನಾವಣಾ ಪದ್ಧತಿಯೂ ಬದಲಾಗಬೇಕಾಗಿದೆ. ರೈಟ್ ಟು ರಿಜೆಕ್ಟ್ ಕಾನೂನು ಜಾರಿಗೆ ಬರಬೇಕು. ಜನಪ್ರತಿನಿಧಿಯ ಕಾರ್ಯ ವೈಖರಿ ಮೆಚ್ಚುಗೆಯಾಗದಿದ್ರೆ ವಾಪಸ್ ಕರೆಯಿಸಿಕೊಳ್ಳುವ ಅಧಿಕಾರ ಜನರಿಗೆ ಇರಬೇಕು ಎಂದರು.
ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆದರೂ ಭ್ರಷ್ಟಾಚಾರ ವಿರುದ್ಧದ ಅಹಿಂಸಾತ್ಮಕ ಹೋರಾಟ ಹೆಮ್ಮೆಯ ವಿಚಾರ. ಅಧಿಕಾರದ ವಿಕೇಂದ್ರಿಕರಣವಾಗುವ ಮೂಲಕ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಬೇಕು. ಗ್ರಾಮಸಭೆಗಳನ್ನು ಪ್ರಬಲಗೊಳಿಸಬೇಕು. ಎಲ್ಲ ಯೋಜನೆಗಳ ವಿವರ ಗ್ರಾಮ ಪಂಚಾಯ್ತಿಗಳಿಗೆ ತಿಳಿಯಬೇಕು. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂದು ಅಣ್ಣಾ ತಿಳಿಸಿದರು.