ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಲೀಲಾದಿಂದ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು (Anna Hazare | Medanta hospital | Ramlila Grounds | fast | Lokpal Bill)
ರಾಮಲೀಲಾದಿಂದ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು
ನವದೆಹಲಿ, ಭಾನುವಾರ, 28 ಆಗಸ್ಟ್ 2011( 13:18 IST )
ಕಳೆದ ಹನ್ನೆರಡು ದಿನದಿಂದ ಉಪವಾಸ ಕೈಗೊಂಡಿದ್ದ ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಆರೋಗ್ಯದಲ್ಲಿ ಹೆಚ್ಚಿನ ಏರುಪೇರು ಆಗದಿದ್ದರೂ ಕೂಡ ಉಪವಾಸ ಅಂತ್ಯಗೊಳಿಸಿದ ನಂತರ ಗುರ್ಗಾಂವ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 288 ಗಂಟೆಗಳ ಕಾಲ ಉಪವಾಸ ಕೈಗೊಂಡಿದ್ದ 74ರ ಹರೆಯದ ಅಣ್ಣಾ ಅವರ ದೇಹ ತೂಕ 7.5 ಕೆ.ಜಿಯಷ್ಟು ಇಳಿದಿತ್ತು. ಹೃದಯ ಬಡಿತ ಸ್ವಲ್ಪ ಹೆಚ್ಚಾಗಿದ್ದರೂ, ಬಿಪಿ ಸಾಮಾನ್ಯ ಸ್ಥಿತಿಯಲ್ಲಿತ್ತು. ಆದರೂ ಅಣ್ಣಾ ಸ್ವಲ್ಪ ನಿಶ್ಯಕ್ತರಾಗಿರುವುದರಿಂದ ಅವರನ್ನು ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಲೀಲಾ ಮೈದಾನದಿಂದ ರಾಜಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಮೊಟಕುಗೊಳಿಸಿದ ಅಣ್ಣಾ ಹಜಾರೆಯವನ್ನು ಇನ್ನೋವಾ ಕಾರಿನಲ್ಲಿ ಮೇದಾಂತ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಅಣ್ಣಾ ಹಜಾರೆಯವರು ಎರಡು ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ನಂತರ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಅಣ್ಣಾ ರಾಮಲೀಲಾದಿಂದ ಕಾರಿನಲ್ಲಿ ಹೊರಟ ಸಂದರ್ಭದಲ್ಲಿ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಆಗಸ್ಟ್ 16ರಿಂದ ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿತ್ತು. ಇದರಿಂದಾಗಿ ಯುಪಿಎ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಕೊನೆಗೂ ಶನಿವಾರ ರಾತ್ರಿ ಸಂಸತ್‌ನ ಉಭಯ ಸದನಗಳಲ್ಲಿ ಮಸೂದೆಯ ನಿರ್ಣಯ ಅಂಗೀಕರಿಸುವ ಮೂಲಕ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಣ್ಣಾ ಭಾನುವಾರ ಬೆಳಿಗ್ಗೆ ಎಳನೀರು ಸೇವಿಸುವ ಮೂಲಕ ಉಸವಾಸ ಅಂತ್ಯಗೊಳಿಸಿದ್ದರು.