ಪ್ರಬಲ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕಳೆದ 12 ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಭಾನುವಾರ ಎಳನೀರು ಮತ್ತು ಜೇನು ಸೇವಿಸುವುದರೊಂದಿಗೆ ಅಂತ್ಯಗೊಳಿಸಿದ್ದರು. ತದನಂತರ ಅಣ್ಣಾ ಹೋರಾಟದ ಕಾರ್ಯಕ್ಷೇತ್ರವಾಗಿದ್ದ ರಾಮಲೀಲಾ ಮೈದಾನ ಖಾಲಿ...ಖಾಲಿ ದೃಶ್ಯಗಳು ಕಂಡುಬಂದವು.
ಸುಮಾರು 12 ದಿನಗಳ ಕಾಲ ಲಕ್ಷಾಂತರ ಮಂದಿ ಅಣ್ಣಾ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ದೇಶ-ವಿದೇಶಗಳ ಗಮನ ಸೆಳೆಯುಂತೆ ಮಾಡಿದ್ದರು. ಐಟಿ-ಬಿಟಿ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಬೇರೆ, ಬೇರೆ ರಾಜ್ಯಗಳಿಂದ ರಾಮಲೀಲಾಕ್ಕೆ ಆಗಮಿಸಿ ಅಣ್ಣಾಗೆ ಸುಮಾರು ಐದು ಲಕ್ಷ ಜನರು ಸಾಥ್ ನೀಡಿದ್ದರು.
ಈ ಸಂದರ್ಭದಲ್ಲಿ ಹಾಲಿವುಡ್ ಖ್ಯಾತನಾಮರು, ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವಾರು ಗಣ್ಯರೂ ಕೂಡ ರಾಮಲೀಲಾಕ್ಕೆ ಆಗಮಿಸಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೈಗೊಂಡಿದ್ದ ಅಣ್ಣಾ ಹಜಾರೆಗೆ ಬೆಂಬಲ ನೀಡಿದ್ದರು.
ಆದರೆ ಭಾನುವಾರ ಬೆಳಿಗ್ಗೆ ಅಣ್ಣಾ ಹಜಾರೆಗೆ ಇಕ್ರಾ ಮತ್ತು ಸಿಮ್ರಾನ್ ಎಂಬಿಬ್ಬರು ಪುಟಾಣಿಗಳು ಎಳನೀರು ಕುಡಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಿದ್ದರು. ಬಳಿಕ ನೆರೆದಿದ್ದ ಲಕ್ಷಾಂತರ ಮಂದಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಸಮಾರಂಭ ಸಮಾಪ್ತಿ ನಂತರ ಅಣ್ಣಾ ಹಜಾರೆ ಅವರನ್ನು ರಾಮಲೀಲಾ ಮೈದಾನದಿಂದ ಗುರ್ಗಾಂವ್‌ನ ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪ್ರತಿಭಟನಾಕಾರರಿಂದ ತುಂಬಿದ್ದ, ಜೈ ಹೋ ಅಣ್ಣಾ ಹಜಾರೆ, ದೇಶಭಕ್ತಿ, ಭಜನೆಯಿಂದ ದೇಶದ ಗಮನಸೆಳೆದಿದ್ದ ರಾಮಲೀಲಾ ಮೈದಾನ ಖಾಲಿ, ಖಾಲಿಯಾಗಿ ಇದೀಗ ಬಿಕೋ ಎನ್ನುತ್ತಿದೆ. ಪೆಂಡಾಲ್, ಕುರ್ಚಿ, ತೆರವುಗೊಳಿಸಿದ್ದಾರೆ. ಇಷ್ಟು ದಿನಗಳ ಕಾಲ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ರಾಮಲೀಲಾ ಮೈದಾನವೇ ಇದು ಎಂಬಷ್ಟು ಅಚ್ಚರಿ ತರುವಷ್ಟು ರಾಮಲೀಲಾ ಮೈದಾನ ನಿಶ್ಯಬ್ದವಾಗಿದೆ....