ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನತೆಯ ಹೋರಾಟಕ್ಕೆ ಜಯ ಸಿಕ್ತು: ಹಾಗಾದ್ರೆ ಮುಂದೇನು? (Anna Hazare | Jan Lokpal Bill | Lokpal | UPA | Parliament)
ದೇಶದ ಕಣಕಣದಲ್ಲಿಯೂ ಇರುವ ಭ್ರಷ್ಟಾಚಾರ ನಿಗ್ರಹಕ್ಕೆ ಶಕ್ತಿಶಾಲಿ ಲೋಕಪಾಲ ಮಸೂದೆ ರಚನೆಯ ಕುರಿತು ಕಳೆದೆರಡು ವಾರ ದೇಶಾದ್ಯಂತ ಎದ್ದ ಆಗ್ರಹದ ಅಲೆಯು, ನಾಗರಿಕ ಸಮಾಜದ ವಿಜಯವಾಗಿ ಮಾರ್ಪಟ್ಟಿರುವಂತೆಯೇ, ಮುಂದಿನ ಹೆಜ್ಜೆಗಳೇನು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಣ್ಣಾ ಹಜಾರೆ ಆಗ್ರಹಗಳಿಗೆ ಕೇಂದ್ರ ಸರಕಾರವು ಒಪ್ಪಿದ್ದು, ಸರಕಾರಿ ಲೋಕಪಾಲ ಮಸೂದೆಗೆ ಸೂಕ್ತ ತಿದ್ದುಪಡಿ ಮಾಡಿ ಕರಡು ಮಸೂದೆಯನ್ನು ಶಿಫಾರಸುಗಳೊಂದಿಗೆ ಮರಳಿಸುವಂತೆ ಸಂಸತ್ತಿನ ಸ್ಥಾಯಿ ಸಮಿತಿಗೆ ಸೂಚಿಸಿದೆ.

ಕೇಂದ್ರದ ಲೋಕಪಾಲರ ಮಾದರಿಯಲ್ಲೇ ಎಲ್ಲ ರಾಜ್ಯಗಳಲ್ಲಿ ಸ್ವಾಯತ್ತ, ಸರ್ವತಂತ್ರ ಸ್ವತಂತ್ರ ಲೋಕಾಯುಕ್ತರ ಸ್ಥಾಪನೆ, ನಾಗರಿಕ ಸನದು ರಚನೆ ಮತ್ತು ಕೆಳ ಹಂತದ ಸರಕಾರಿ ಅಧಿಕಾರಿಗಳೆಲ್ಲರನ್ನೂ ಲೋಕಪಾಲ ವ್ಯಾಪ್ತಿಗೆ ತರಬೇಕು ಎಂಬ ಅಣ್ಣಾ ಹಜಾರೆಯವರ ಮೂರು ಪ್ರಮುಖ ಬೇಡಿಕೆಗಳನ್ನು ಸರಕಾರವು ಸ್ಥಾಯಿ ಸಮಿತಿಗೆ ಕಳುಹಿಸಿದೆ.

ಸ್ಥಾಯಿ ಸಮಿತಿಯು ಈ ಬೇಡಿಕೆಗಳೊಂದಿಗೆ, ಈಗಾಗಲೇ ಕಣದಲ್ಲಿರುವ ಎಲ್ಲ 9 ಲೋಕಪಾಲ ಕರಡು ಮಸೂದೆಗಳ ಪರಾಮರ್ಶೆ ನಡೆಸಲಿದೆ. ಇದರಲ್ಲಿ ಜನ ಲೋಕಪಾಲ, ಅರುಣಾ ರಾಯ್ ಸಲ್ಲಿಸಿದ್ದ ಲೋಕಪಾಲ, ಜಯಪ್ರಕಾಶ್ ನಾರಾಯಣ್ ಅವರ ಲೋಕಪಾಲ ಕರಡು ಮಸೂದೆಗಳೂ ಸೇರಿವೆ.

ಇದಲ್ಲದೆ, ಸಂಸದ ರಾಹುಲ್ ಗಾಂಧಿ, ಮಾಜಿ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರ ಸಲಹೆಗಳು ಹಾಗೂ ನಾಗರಿಕರ ಶಿಫಾರಸುಗಳನ್ನು ಕೂಡ ಸಮಿತಿಯು ಪರಿಗಣಿಸಲಿದೆ. ನಂತರ ಸಮಗ್ರ ವರದಿಯನ್ನು ಶಿಫಾರಸುಗಳ ಸಹಿತವಾಗಿ ಸಂಸತ್ತಿಗೆ ವಾಪಸ್ ಕಳುಹಿಸಲಿದೆ.

ಈ ಎಲ್ಲ ಕಾರ್ಯಗಳಿಗಾಗಿ ತಾಂತ್ರಿಕವಾಗಿ ಯಾವುದೇ ಡೆಡ್‌ಲೈನ್ ವಿಧಿಸಿಲ್ಲವಾದರೂ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸ್ಥಾಯಿ ಸಮಿತಿಯು ತನ್ನ ವರದಿಯನ್ನು ಸಂಸತ್ತಿಗೆ ಒಪ್ಪಿಸುವ ಸಾಧ್ಯತೆಗಳಿವೆ.

ಬಳಿಕ ಸಂಸತ್ತು ಈ ಕರಡು ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದೆ. ಈ ಹಂತದಲ್ಲೇ, ಬೇಕು ಬೇಕಾದ ತಿದ್ದುಪಡಿಗಳನ್ನೂ ಮಾಡಲಿದೆ.

ಅಂತಿಮವಾಗಿ ಸಂಸತ್ತಿನಲ್ಲಿ ಈ ಮಸೂದೆಯ ಅಂಗೀಕಾರಕ್ಕಾಗಿ ಒಮ್ಮತ ಮೂಡದೇ ಇದ್ದರೆ ಮತದಾನ ನಡೆಯಲಿದೆ. ಬಳಿಕ ಕಾಯ್ದೆ ಜಾರಿಗೆ ಬರಲಿದೆ.

ಆದರೆ, ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿಗೆ ಸರಕಾರದ ಮೇಲೆ ಇನ್ನೂ ಪರಿಪೂರ್ಣ ವಿಶ್ವಾಸ ಬಂದಿಲ್ಲ. ಕಾಯ್ದೆ ರೂಪಿಸುವುದು ಸಂಸತ್ತಿನ ಪರಮಾಧಿಕಾರವಾಗಿರುವುದರಿಂದ ಯಾವುದೇ ರೀತಿಯಲ್ಲಿಯೂ ಸಂಸದರು ತಿದ್ದುಪಡಿಗಳನ್ನು ಮಾಡಬಹುದಾಗಿದೆ, ಸಂಸದರಿಂದಲೂ ಕಠಿಣ ಕಾಯ್ದೆಗೆ ವಿರೋಧ ವ್ಯಕ್ತವಾಗಬಹುದಾಗಿದೆ.

ಸರಕಾರವು ಈ ಹಿಂದೆಯೂ ಹಲವು ಬಾರಿ ಒಡಕು ಧ್ವನಿಯಲ್ಲಿ ಮಾತನಾಡುತ್ತಾ, ಮಾತಿಗೆ ತಪ್ಪಿದ ಕಾರಣದಿಂದಾಗಿ ಅದು ವಿಶ್ವಾಸ ಕಳೆದುಕೊಂಡಿದೆ. ಇದೇ ಕಾರಣಕ್ಕಾಗಿಯೇ ಅಣ್ಣಾ ಹಜಾರೆ ಅವರು, ನಿರಶನವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಭಾನುವಾರ ಘೋಷಿಸಿದ್ದರು. ಅಣ್ಣಾ ಹಜಾರೆ ಮತ್ತೊಮ್ಮೆ ಹೋರಾಟ ಮಾಡಬೇಕಾದೀತೇ ಎಂಬುದಕ್ಕೆ ಚಳಿಗಾಲದ ಅಧಿವೇಶನದವರೆಗೂ ಕಾಯಬೇಕಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಭ್ರಷ್ಟಾಚಾರ, ಉಪವಾಸ ಸತ್ಯಾಗ್ರಹ, ಲೋಕಪಾಲ, ಜನಲೋಕಪಾಲ, ಸಂಸತ್ತು, ಯುಪಿಎ