ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಸ್ಫೋಟ: ಇನ್ನೆಷ್ಟು ಮುಗ್ಧರ ಮಾರಣಹೋಮವಾಗ್ಬೇಕು? - ಬಿಜೆಪಿ ಕಿಡಿ
(Delhi Blast | Breaking News in Kannada | Kannada Website)
ದೆಹಲಿ ಸ್ಫೋಟ: ಇನ್ನೆಷ್ಟು ಮುಗ್ಧರ ಮಾರಣಹೋಮವಾಗ್ಬೇಕು? - ಬಿಜೆಪಿ ಕಿಡಿ
ನವದೆಹಲಿ, ಬುಧವಾರ, 7 ಸೆಪ್ಟೆಂಬರ್ 2011( 16:04 IST )
ದೆಹಲಿ ಹೈಕೋರ್ಟ್ ಹೊರಗೆ ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿ ಬಾಂಬ್ ಸ್ಫೋಟ ಸಂಭವಿಸಿ 10 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಈ ರೀತಿಯ ಸ್ಫೋಟಗಳಿಂದಾಗಿ ಈ ದೇಶದಲ್ಲಿ ಇನ್ನೆಷ್ಟು ಮಂದಿ ಮುಗ್ಧ ಜನತೆ ಸಾವನ್ನಪ್ಪಬೇಕು ಎಂಬುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬುಧವಾರ ಬೆಳಿಗ್ಗೆ 10.17ರ ಸುಮಾರಿಗೆ ಸಂಭವಿಸಿದ ಸ್ಫೋಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಸರಕಾರದ ವೈಫಲ್ಯದ ವಿರುದ್ಧ ಕಿಡಿ ಕಾರಿದರು.
ದೇಶದಲ್ಲಿ ನಡೆದ ಶೇ.99ರಷ್ಟು ಭಯೋತ್ಪಾದನಾ ದಾಳಿಗಳನ್ನೂ ಯುಪಿಎ ಸರಕಾರ ತಡೆದಿದೆ. ಕೇವಲ ಶೇ.1ರಷ್ಟು ಪ್ರಕರಣಗಳಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದುದು ಇಲ್ಲಿ ಗಮನಾರ್ಹ.
ದೆಹಲಿ ಹೈಕೋರ್ಟ್‌ನಲ್ಲಿ ಸಾಕಷ್ಟು ಸ್ಫೋಟಗಳು ಇದುವರೆಗೆ ಸಂಭವಿಸಿದೆ. ಅಲ್ಲಿನ ಅತ್ಯಂತ ಜನನಿಬಿಡ ಗೇಟಿನಲ್ಲೇ ಭಯೋತ್ಪಾದಕರು ಬಂದು ಬಾಂಬ್ ಹಾಕಿ ಹೋಗುತ್ತಿದ್ದಾರೆ. ದೆಹಲಿ ಪೊಲೀಸರು ಮತ್ತು ಭಾರತ ಸರಕಾರಕ್ಕೆ ಯಾರು ಏನು ಎಂಬ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದು ನಿಜಕ್ಕೂ ವಿಷಾದನೀಯ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಗೃಹ ಸಚಿವರ ವೈಫಲ್ಯ: ಸಿಪಿಐ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐ ನಾಯಕ ಡಿ.ರಾಜಾ, ದೇಶದ ಜನರನ್ನು ರಕ್ಷಿಸುವಲ್ಲಿ ಕೇಂದ್ರ ಗೃಹ ಸಚಿವಾಲಯವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಇಂತಹಾ ಕೃತ್ಯಗಳು ಪದೇ ಪದೇ ನಡೆಯುತ್ತಿರುವುದೇಕೆ ಎಂಬುದನ್ನು ತನಿಖೆ ನಡೆಸಬೇಕಾಗಿದೆ. ಇದು ತಮ್ಮ ಸರಕಾರದ ನೀತಿಯ ವೈಫಲ್ಯವೇ ಅಥವಾ ಗುಪ್ತಚರ ವೈಫಲ್ಯವೇ ಎಂಬುದನ್ನು ಸರಕಾರವೇ ತನಿಖೆ ನಡೆಸಬೇಕಾಗಿದೆ. ಖಂಡಿತವಾಗಿಯೂ ಇದು ಗೃಹ ಸಚಿವಾಲಯದ ವೈಫಲ್ಯ ಎಂದು ಅವರು ದೂರಿದರು.