ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟನೆಂದು ನಿಂದಿಸಿದ ಮನೀಷ್ ತಿವಾರಿಗೆ ಅಣ್ಣಾ ಹಜಾರೆ ಕಾನೂನು ನೋಟೀಸ್ (Corruption | Anna Hazare | Manish Tiwari | News in Kannada | Kannada Online)
ಭ್ರಷ್ಟನೆಂದು ನಿಂದಿಸಿದ ಮನೀಷ್ ತಿವಾರಿಗೆ ಅಣ್ಣಾ ಹಜಾರೆ ಕಾನೂನು ನೋಟೀಸ್
ಪುಣೆ, ಶುಕ್ರವಾರ, 9 ಸೆಪ್ಟೆಂಬರ್ 2011( 09:45 IST )
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರನ್ನು "ಕಾಲಿನಿಂದ ತಲೆಯವರೆಗೂ ಭ್ರಷ್ಟ" ಎಂದು ಎಲ್ಲೆಡೆಯಿಂದ ಟೀಕೆ ಬಂದ ಬಳಿಕ 'ವಿಷಾದ' ವ್ಯಕ್ತಪಡಿಸಿದ್ದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿಯ ಈ ನಾಟಕವು ಭ್ರಷ್ಟಾಚಾರ-ವಿರೋಧೀ ಹೋರಾಟಗಾರನ ಮನಸ್ಸನ್ನು ತಣಿಸಿದಂತಿಲ್ಲ. ಈ ಬಗ್ಗೆ ಲಿಖಿತವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಹಜಾರೆ ಅವರು ತಿವಾರಿಗೆ ಕಾನೂನು ನೋಟೀಸ್ ಜಾರಿ ಮಾಡಿದ್ದಾರೆ.
ಹಜಾರೆಯವರ ವಕೀಲ ಮಿಲಿಂದ್ ಪವಾರ್ ಅವರು ತಿವಾರಿಗೆ ಇಮೇಲ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಮೂಲಕ ನೋಟೀಸ್ ಕಳುಹಿಸಿದ್ದಾರೆ. ಇದಕ್ಕೆ ಮೊದಲು, ಹಜಾರೆಯನ್ನು ನಿಂದಿಸಿದ್ದಕ್ಕಾಗಿ ತಿವಾರಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪವಾರ್ ಹೇಳಿದ್ದರು.
ಈ ನೋಟೀಸಿನಲ್ಲಿ, "ನೀವು ಮತ್ತು ನಿಮ್ಮ ಪಕ್ಷದ ಪರವಾಗಿ ಲಿಖಿತವಾಗಿ ಕ್ಷಮೆ ಯಾಚಿಸಬೇಕು. ಭವಿಷ್ಯದಲ್ಲಿ ಹಜಾರೆ ಬಗ್ಗೆ ಈ ರೀತಿ ಅವಮಾನಕರ ಹೇಳಿಕೆಯನ್ನು ನೀಡುವುದಿಲ್ಲವೆಂದು ಬರೆದುಕೊಡಬೇಕು" ಎಂದು ತಿವಾರಿಗೆ ಸೂಚನೆ ನೀಡಲಾಗಿದೆ.
ಸಾವಂತ್ ಆಯೋಗದ ವರದಿಯನ್ನು ಉಲ್ಲೇಖಿಸಿದ್ದ ತಿವಾರಿ, ಹಜಾರೆ ಅವರು ಕಾಲಿನಿಂದ ತಲೆಯವರೆಗೆ ಭ್ರಷ್ಟಾಚಾರದ ರಾಶಿಯಲ್ಲಿ ಮುಳುಗಿದ್ದಾರೆ ಎಂಬ ಹೇಳಿಕೆ ನೀಡಿ, ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಬಳಿಕ ಅವರು ಮೌನವಾಗಿರುವಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಸೂಚನೆ ಬಂದಿತ್ತು ಎಂದು ಹೇಳಲಾಗುತ್ತಿದೆ. ಈ ಹೇಳಿಕೆ ನೀಡಿ ಹಲವಾರು ದಿನಗಳ ಕಾಲ 'ನಾಪತ್ತೆ'ಯಾಗಿದ್ದ ತಿವಾರಿ ಅವರು, ಬಳಿಕ ಧುತ್ತನೆ ಕಾಣಿಸಿಕೊಂಡು, ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸುತ್ತಿರುವುದಾಗಿ ತಿಳಿಸಿದ್ದರು.
ಲಿಖಿತವಾಗಿ ಕ್ಷಮೆ ಯಾಚಿಸದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿಯೂ ಈ ನೋಟೀಸಿನಲ್ಲಿ ಎಚ್ಚರಿಸಲಾಗಿದೆ.