ಸಮ್ಮಿಶ್ರ ಸರಕಾರದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ತಿಕ್ಕಾಟವನ್ನು ಗಮನಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಒಂದು ವೇಳೆ ಬಿಜೆಪಿ ಮತ್ತು ಜೆಡಿ ಎಸ್ ನಡುವೆ ಅಧಿಕಾರ ಹಸ್ತಾಂತರ ಸಮಸ್ಯೆಯಾಗಿ ಪರಿಣಮಿಸಿದರೆ, ತಾನು ಜೆಡಿಎಸ್ ಜೊತೆ ಮತ್ತೆ ಕೈಗೂಡಿಸಿ ಅಧಿಕಾರಕ್ಕೆ ಏರುವುದಿಲ್ಲ. ಸಮ್ಮಿಶ್ರ ಸರಕಾರದ ರಚನೆಗೆ ಬದಲು ಮಧ್ಯಂತರ ಚುನಾವಣೆಗೆ ಆದ್ಯತೆ ನೀಡುವುದಾಗಿ ತನ್ನ ನಿಲುವು ಪ್ರಕಟಿಸಿದೆ.
ಗುಲ್ಬರ್ಗಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮ್ಮಿಶ್ರ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಲ್ಲಿ, ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳೊಂದಿಗೆ ಕೈಗೂಡಿಸುವುದಕ್ಕೆ ಕಾಂಗ್ರೆಸ್ ಮುಂದಾಗದು. ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ಸರಿಯಾದ ಮಾರ್ಗ ಎಂದು ಹೇಳಿದ್ದಾರೆ.
ರಾಜ್ಯದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತು ಪಕ್ಷದ ಹೈಕಮಾಂಡಿಗೆ ವರದಿ ಸಲ್ಲಿಸಲಾಗಿದ್ದು. ವರದಿ ಮತ್ತು ಪರಿಸ್ಥಿತಿಯನ್ನಾಧರಿಸಿ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರದೇಶ ಕಾಂಗ್ರೆಸ್ ಬದ್ದ ಎಂದು ಪುನರುಚ್ಛರಿಸಿದರು.
ಜೆಡಿಎಸ್ ಮತ್ತು ಬಿಜೆಪಿಯ ಕರ್ನಾಟಕ ಅಭಿವೃದ್ದಿ ರಂಗ ಬಹುದಿನಗಳ ಕಾಲ ಅಸ್ತಿತ್ವದಲ್ಲಿ ಉಳಿಯಲಾರದು ಎಂದು ಹೇಳಿದ ಖರ್ಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಸಮಸ್ಯೆಗಳಿಗೆ ಬಗ್ಗೆ ದ್ವಂದ್ವ ನಿಲುವಿನ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಉಭಯ ನಾಯಕರು ಕೇವಲ ಅಧಿಕಾರ ಹಸ್ತಾಂತರದ ದಿನಗಳ ಲೆಕ್ಕ ಹಾಕುತ್ತಿದ್ದು, ಇದು ರಾಜ್ಯದ ಆರ್ಥಿಕಾಭಿವೃದ್ದಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಧರ್ಮಸಿಂಗ್ ಅವರನ್ನು ರಾಜಕೀಯದಿಂದ ನಿವೃತ್ತಿಯಾಗುವಂತೆ ಕೇಳಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ವೃದ್ದಾಪ್ಯವನ್ನು ತಲುಪಿದ್ದಾರೆ ಎಂದು ಹೇಳಿದರು.
|