ಮಾದಕ ವಸ್ತು ಸಾಗಾಣಿಕೆಯ ಅತಿದೊಡ್ಡ ಜಾಲವನ್ನು ಬೇಧಿಸಿರುವ ಬೆಂಗಳೂರು ಪೊಲೀಸರು ಸುಮಾರು ಆರು ಕೋಟಿ ರೂ ಮೌಲ್ಯದ ಐದು ಕೆಜಿ ಹೆರಾಯಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡು, ಮಾದಕ ವಸ್ತು ಸಾಗಾಣಿಕೆಯಲ್ಲಿ ನಿರತರಾಗಿದ್ದ ಮದ್ಯಪ್ರದೇಶ ರಾಜ್ಯ ವಾಲಿಬಾಲ್ ತಂಡದ ಇಬ್ಬರು ಆಟಗಾರರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಖಚಿತ ಮಾಹಿತಿಯನ್ನು ಆಧರಿಸಿ, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಅಟೊದಲ್ಲಿ ಕುಳಿತು ಹೆರಾಯಿನ್ ತೆಗೆದುಕೊಳ್ಳಲು ಬರುವ ವ್ಯಕ್ತಿಗೆ ಕಾಯುತ್ತಿದ್ದ ಇಬ್ಬರನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದರು ಎಂದು ಪೊಲೀಸ್ ಕಮಿಷನರ್ ಎನ್ ಅಚ್ಯುತ್ ರಾವ್, ಪತ್ರಕರ್ತರಿಗೆ ಮಾಹಿತಿ ನೀಡಿದರು.
ಆರೋಪಿಗಳನ್ನು ಅಂಜನಿ ಕುಮಾರ್ (28) ಭೊಪಾಲ್, ವಾಲಿಬಾಲ್ ಆಟಗಾರ, ಮತ್ತು ಐಸಾನುಲ್ಲಾ ಖದೇರ್ ಭಕ್ಷಿ (52) ರಾಜಸ್ಥಾನದ, ಜಲ್ವಾರ್ ಜಿಲ್ಲೆಯ ಪೆಡವಾ ಗ್ರಾಮದ ವಾಸಿ ಎಂದು ಗುರುತಿಸಲಾಗಿದೆ.
ವಶಪಡಿಸಿಕೊಳ್ಳಲಾಗಿರುವ ಹೆರಾಯಿನ್ ಉತ್ತಮ ಗುಣಮಟ್ಟದ್ದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರು ಕೋಟಿ ರೂ ಬೆಲೆ ಬಾಳುತ್ತದೆ. ಬೆಂಗಳೂರು ಪೊಲೀಸರು ಈ ತಿಂಗಳಲ್ಲಿ ಎರಡನೆ ಬಾರಿಗೆ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಕಳೆದ ಅಗಸ್ಟ್ 10 ರಂದು ಉದ್ಯಾನ್ ಎಕ್ಸಪ್ರೆಸ್‌ನಿಂದ ಎರಡು ಕೋಟಿ ರೂ ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.
|