ನಗರದಲ್ಲಿ ನೂತನವಾಗಿ ಆರಂಭವಾಗುವ ಹೋಟೆಲುಗಳಿಗೆ ಲೈಸೆನ್ಸ್ ನೀಡುವ ಜವಾಬ್ದಾರಿಯನ್ನು ಬೆಂಗಳೂರು ಹೊಟೇಲು ಸಂಘಕ್ಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಅಶೋಕ್ ಪ್ರಕಟಿಸಿದ್ದಾರೆ.
ಬೆಂಗಳೂರು ಹೋಟೆಲ್ ಸಂಘದ ವತಿಯಿಂದ ಹೋಟೆಲ್ ಉದ್ಯಮದಲ್ಲಿ ಸಾರ್ವಜನಿಕರ ಆರೋಗ್ಯ, ಸ್ವಚ್ಛತೆಯ ಪರಿಸರ, ಆಹಾರದ ಗುಣಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೊಟೇಲುಗಳಿಗೆ ನೀಡುವ ಲೈಸೆನ್ಸ್ ಅನ್ನು ಏಕಗವಾಕ್ಷಿ ಮೂಲಕ ವಿತರಿಸುವ ಭರವಸೆ ನೀಡಿದರು. ಹೊಟೇಲು ಉದ್ಯಮದ ನೌಕರರ ಆರೋಗ್ಯವನ್ನು ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಆಹಾರದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಜನರ ಆರೋಗ್ಯಕ್ಕೆ ಮಾರಕವಾಗುವ ಹಾನಿಕಾರಕ ಬಣ್ಣಗಳಿಗೆ ಸ್ವತಃ ಹೋಟೇಲಿವರೇ ಕಡಿವಾಣ ಹಾಕಬೇಕು. ಅಲ್ಲದೆ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಜವಾಬ್ದಾರಿಯನ್ನು ಹೊಟೇಲುಗಳು ಹೊಂದಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಯು ರಾಜ್ಯಾಧ್ಯಕ್ಷ ಬಿ.ಸೋಮಶೇಖರ್, ಶಾಸಕರಾದ ಗೋಪಾಲ ಪೂಜಾರಿ, ಕೆ.ಪಿ.ಎಚ್.ಆರ್.ಎ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಹೋಟೆಲ್ ಉದ್ಯಮದಾರರ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಬೆಸ್ಕಾಂ ನಿರ್ದೇಶಕ ಜಯರಾಂ ಭಾಗವಹಿಸಿದ್ದರು.
ವೆಬ್ ಸೈಟ್ ಉದ್ಘಾಟನೆ : ಬೆಂಗಳೂರು ಹೋಟೆಲ್ ಸಂಘದ ಹಿನ್ನೆಲೆ, ಸಂಘ ನಡೆದು ಬಂದ ದಾರಿ ಕುರಿತು ಮಾಹಿತಿ ಒದಗಿಸುವ ವೆಬ್ ಸೈಟ್‌ಗೆ, ಶಾಸಕ ಜಯಪ್ರಕಾಶ್ ಹೆಗ್ಡೆ, ಈ ಸಮಾರಂಭದಲ್ಲಿ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಹೋಟೆಲ್ ಗಳ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ ಅಡಿಗ ವಹಿಸಿದ್ದರು.ಸಂಘದ ಪದಾಧಿಕಾರಿಗಳಾದ ಹೆಚ್.ಬಿ.ರಾಜೀವ್ ಶೆಟ್ಟಿ, ಪಿ.ಸಿ.ರಾವ್, ಕೆ.ಬಾಲಚಂದ್ರ ಶೆಟ್ಟಿ, ಕೆ.ಕೇಶವ ಹೊಳ್ಳ, ಬಿ.ಗಣೇಶ್ ರಾವ್ ಉಪಸ್ಥಿತರಿದ್ದರು.
|