2005-06ನೇ ಸಾಲಿನ ಲೆಕ್ಕಪತ್ರ ಸಲ್ಲಿಸದಿದ್ದ 737 ಗ್ರಾ.ಪಂ. ಕಾರ್ಯದರ್ಶಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಮುಂದಾಗಿದೆ. ರಾಜ್ಯ ಲೆಕ್ಕಪತ್ರ ಇಲಾಖೆ ನಿಯಂತ್ರಕರು ಮತ್ತು ಮಹಾ ಲೇಖಪಾಲರ ವರದಿ ಅನ್ವಯ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಸೂಕ್ತ ಸಮಯದಲ್ಲಿ ಆಡಿಟ್‌ಗೆ ಲೆಕ್ಕಪತ್ರ ಒದಗಿಸದಿರುವುದು, ಗ್ರಾಮ ಪಂಚಾಯತಿಗಳ ಆರ್ಥಿಕ ವಹಿವಾಟು ಸಂದೇಹಕ್ಕೆ ಎಡೆಮಾಡಿದೆ. ಆದರೆ ಶಿಕ್ಷೆಗೆ ಗುರಿಯಾಗಬೇಕಾದ ಗ್ರಾಮಪಂಚಾಯತಿ ಕಾರ್ಯದರ್ಶಿಗಳು ಮಾಡಿದ ಅಪರಾಧಗಳು ಉದ್ದೇಶ ಪೂರ್ವಕವಾಗಿ ಮಾಡಿರುವಂಥವುಗಳಲ್ಲ.
ಸೂಕ್ತ ಸಮಯದಲ್ಲಿ ಲೆಕ್ಕಪತ್ರ ಸಲ್ಲಿಸದೇ ಇರಲು ಅವರಲ್ಲಿನ ಅನುಭವ ಹಾಗು ತರಬೇತಿಯ ಕೊರತೆಯೇ ಕಾರಣ. ಬಹುತೇಕ ಕಾರ್ಯದರ್ಶಿಗಳ ವಿದ್ಯಾಭ್ಯಾಸ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ. ವಿವಿಧ ಯೋಜನೆಗಳಡಿ ಪ್ರತಿ ಗ್ರಾಮಕ್ಕೆ ಪ್ರತಿ ವರ್ಷ ಲಕ್ಷಾಂತರ ರೂ.ಗಳು ಕೆಲವೊಮ್ಮೆ ಒಂದುವರೆ ಕೋಟಿ ರೂ.ಗಳಷ್ಟು ಅನುದಾನ ಬರುತ್ತದೆ.
ಈ ಬೃಹತ್ ಮೊತ್ತದ ಲೆಕ್ಕಗಳನ್ನು ನಿಭಾಯಿಸುವುದು ಅವರಿಗೆ ಅಸಾಧ್ಯವಾಗಿ ಪರಿಣಮಿಸಿ ತಪ್ಪುಗಳಾಗುತ್ತಿವೆ ಎಂದು ಹೇಳಲಾಗುತ್ತಿದೆ.
|