ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ಅನಧಿಕೃತವಾಗಿ ನಿರ್ಮಿಸಿರುವ ಬೃಹತ್ ಜಾಹೀರಾತು ಪ್ರಚಾರ ಫಲಕಗಳನ್ನು. ತೆರವುಗೊಳಿಸದ ಅನಧಿಕೃತ ಬೃಹತ್ ಜಾಹೀರಾತು ಫಲಕಗಳನ್ನು ಪಾಲಿಕೆ ವಿಶೇಷ ಕಾರ್ಯಾಚರಣೆ ನಡೆಸಿ, ಅವುಗಳನ್ನು ತೆರವುಗೊಳಿಸುವುದರ ಜೊತೆಗೆ ತೆರವು ಕಾರ್ಯಾಚರಣೆಗೆ ತಗುಲಿದ ವೆಚ್ಚ ಹಾಗೂ ಸೂಕ್ತ ದಂಡ ರೂಪದ ಮೊತ್ತವನ್ನು ಸಂಬಂಧಪಟ್ಟ ಜಾಹೀರಾತು ಸಂಸ್ಥೆಗಳಿಗೆ ವಿಧಿಸಲಾಗುವುದು. ಇಂತಹ ಅನಧಿಕೃತ ಜಾಹೀರಾತುಗಳು ಉಳಿದು ಬಂದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ವಲಯ ಜಂಟಿ ಆಯುಕ್ತರುಗಳನ್ನೆ ನೇರ ಜವಾಬ್ದಾರರು ಎಂದು ಪರಿಗಣಿಸಲಾಗುವುದಾಗಿ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗೆ ನಿರ್ಮಿಸಿರುವ ಎಲ್ಲ ವಿಧವಾದ ಜಾಹೀರಾತು ಫಲಕಗಳನ್ನು ಪಾಲಿಕೆಯ ಜಾಹೀರಾತು ವಿಭಾಗದಿಂದ ನೋಂದಾವಣೆ ಪಡೆದು ಪ್ರದರ್ಶಿಸುವಂತೆ ಸೂಚಿಸಲಾಗಿತ್ತು. ತೆರವಿಗೆ ಈ ತಿಂಗಳ ಅಂತ್ಯದವರೆಗೆ ಕಾಲಾವಕಾಶವನ್ನು ನೀಡಿದ್ದು, ಈ ರೀತಿಯ ಕ್ರಮಗಳನ್ನು ಪಾಲಿಸದಿರುವ ಜಾಹೀರಾತು ಫಲಕಗಳನ್ನು ಅನಧಿಕೃತವೆಂದು ಪರಿಗಣಿಸಿ ಮೇಲ್ಕಂಡ ರೀತಿಯಲ್ಲಿ ಕ್ರಮ ಜರುಗಿಸುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆಯ ವ್ಯಾಪ್ತಿಯೊಳಗೆ ಬಹು ಅಂತಸ್ತಿನ ವಾಸದ ಕಟ್ಟಡಗಳ ಸಮುಚ್ಚಯದ ಮುಂಭಾಗದಲ್ಲಿ ಸಂಬಂಧಪಟ್ಟ ಕಟ್ಟಡದ ವ್ಯವಸ್ಥಾಪಕರುಗಳು Visitors Vehicles Not allowed ಎಂಬ ಫಲಕಗಳನ್ನು ಅಳವಡಿಸಿ ತಮ್ಮ ಕಟ್ಟಡದ ಸಂಬಂಧಪಟ್ಟವರ ಸಂದರ್ಶನಕ್ಕೆ ಬರುವವರ ವಾಹನ ನಿಲುಗಡೆಗೆ ಅಡ್ಡಿಯುಂಟು ಮಾಡುವುದನ್ನು ತಡೆಗಟ್ಟಲು,ತಮ್ಮ ಕಟ್ಟಡದ ನೆಲ ಅಂತಸ್ತಿನಲ್ಲಿ ಖಡ್ಡಾಯವಾಗಿ ಸ್ಥಳಾವಕಾಶ ನೀಡಬೇಕಾಗುವುದೆಂದು ಕಟ್ಟಡ ನಿಯಮಾವಳಿ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ
ಆ ಪ್ರಕಾರವೇ ಪಾಲಿಕೆಯು ಕಟ್ಟಡ ನಕ್ಷೆ ಮಂಜೂರಾತಿ ನೀಡಿರುತ್ತದೆ. ಈ ನಿಯಮಗಳನ್ನು ಮೀರಿ ಬಹಳಷ್ಟು ವಾಣಿಜ್ಯ ಕಟ್ಟಡಗಳ ಸಮುಚ್ಚಯಗಳವರು ತಮ್ಮ ಕಟ್ಟಡದ ಕೆಳ ಅಂತಸ್ತಿನಲ್ಲಿ ಸೂಕ್ತ ಸ್ಥಳಾವಕಾಶವನ್ನು ಒದಗಿಸದೇ, ಈ ಕಟ್ಟಡಗಳ ಸುತ್ತಮುತ್ತ ಇರುವ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿರುತ್ತಾರೆ. ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ಸೂಕ್ತ ರೀತಿಯ ದಂಡವನ್ನು ವಿಧಿಸಲಾಗುವುದು. ನಿಯಮ ಪಾಲಿಸದ ಕಟ್ಟಡ ಮಾಲೀಕರು ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು
|