ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ 2006-07 ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ ಚಲನಚಿತ್ರಗಳ ಪಟ್ಟಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿರುವುದರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಡೆಯುವುದು ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಇಂದು ಕಾರ್ಯಕ್ರಮ ನಡೆಯಲಿದೆ. ತಡೆಯಾಜ್ಞೆ ಕೋರಿ ಖ್ಯಾತ ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.
ಈ ನಡುವೆ, ತುಳು ಚಿತ್ರ 'ಕೋಟಿ ಚೆನ್ನಯ'ವನ್ನು ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ ಎಂದು ಆಕ್ಷೇಪಿಸಿ ಅದರ ನಿರ್ಮಾಪಕ ಆರ್.ಧನರಾಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದಕ್ಕೆ ಮೊದಲು, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿತ್ತು. ಪ್ರಶಸ್ತಿಗಾಗಿ ಒಟ್ಟು 37 ಚಲನಚಿತ್ರಗಳ ನಿರ್ಮಾಪಕರು ಅರ್ಜಿ ಸಲ್ಲಿಸಿದರು. ಆ ಪೈಕಿ ಬರಗೂರು ರಾಮಚಂದ್ರಪ್ಪ ಅವರ ಚಿತ್ರ ‘ಜಾನಪದ’ವೂ ಸೇರಿತ್ತು.
ಪ್ರಶಸ್ತಿ ಆಯ್ಕೆಯಲ್ಲಿ ಜಾನಪದ ಚಿತ್ರವನ್ನು ಕಡೆಗಣಿಸಲಾಗಿದೆ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡುವಾಗ ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸಮಿತಿಯ ಈ ಕ್ರಮವು ಸರ್ಕಾರ ಪ್ರಶಸ್ತಿಗಳ ಆಯ್ಕೆಗೆ ರೂಪಿಸಿದ ಮಾನದಂಡ ಮತ್ತು ಸರ್ಕಾರದ ಆಶಯಕ್ಕೆ ವ್ಯತಿರಿಕ್ತವಾಗಿದೆ ಎಂಬುದು ಬರಗೂರರ ಆರೋಪ.
ಬರಗೂರು ರಾಮಚಂದ್ರಪ್ಪ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ವಾರ್ತಾ ಇಲಾಖೆ ಹಾಗು 2006-07 ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಗುರುವಾರ ಇದರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಅಜಿತ್ ಗುಂಜಾಳ್, ತಡೆಯಾಜ್ಞೆ ನೀಡಲು ನಿರಾಕರಿಸಿದರಾದರೂ, ಬರಗೂರು ಪ್ರಸ್ತಾಪಿಸಿದ್ದ ಇತರ ಎರಡು ವಿಷಯಗಳ ಕುರಿತು ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದರು.
|