ಆತಂಕ ಕೆರಳಿಸಿದ್ದ ಸಾತನೂರು ದ್ವೇಷ ರಾಜಕಾರಣವು ಮುಖ್ಯಮಂತ್ರಿ ಸ್ಪಷ್ಟನೆಯಲ್ಲಿ ಮುಕ್ತಾಯಗೊಂಡಂತೆ ಕಂಡರೂ, ಅದು ಶುಕ್ರವಾರ ಮತ್ತೊಮ್ಮೆ ಹಾಸನದಲ್ಲಿ ಪ್ರತಿಧ್ವನಿಸಿದೆ.
ಸಾತನೂರಿನ ಪ್ರಸಂಗದ ಮುಂದುವರಿದ ಭಾಗವೆಂಬಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಕಡುವೈರಿ ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತೆ ಕಿಡಿ ಕಾರಿದ್ದು, ಡಿ.ಕೆ.ಶಿ. ಅವರು ತಾಯಿಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಹಾಸನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ತಾಯಿ ತಮಗೂ ಮಾತೃ ಸಮಾನರು. ಆದರೆ ರಾಜಕೀಯ ಕಾರಣಕ್ಕಾಗಿ ಅವರನ್ನು ಬೀದಿಗೆ ತಂದಿದ್ದು ಸರಿಯಲ್ಲ ಎಂದಿದ್ದಾರೆ.
ಕನಕಪುರದಲ್ಲಿ ಪಿ.ಜಿ.ಆರ್. ಸಿಂಧ್ಯಾಅವರಿಗೆ ತಾವು ಕಪಾಳಮೋಕ್ಷ ಮಾಡಿರುವುದಾಗಿ ಆರೋಪ ಮಾಡಿದ ಶಿವಕುಮಾರ್ ನಿಜವಾಗಲೂ ಅವರ ತಂದೆ ತಾಯಿಗೆ ಜನಿಸಿದ್ದರೆ ಸ್ಪಷ್ಟೀಕರಣ ನೀಡಲಿ ಎಂದು ತಾವು ಸವಾಲೆಸೆದಿದ್ದು, ಅದಕ್ಕೆ ಅವರ ತಾಯಿಗೆ ನೋವಾಗಿದ್ದರೆ ಕ್ಷಮಿಸುವಂತೆ ಕೇಳಿಕೊಂಡಿದ್ದಾಗಿ ವಿವರಿಸಿದರು.
ಬಿಎಂಐಸಿ ಕುರಿತ ಸ್ಪಷ್ಟೀಕರಣ: ನೈಸ್ ಕಂಪನಿಯಿಂದ ಬಿಎಂಐಸಿ ಯೋಜನೆಯನ್ನು ಸರಕಾರ ವಾಪಸ್ ಪಡೆಯಲು ನಿರ್ಧರಿಸಿದ್ದು, ಸರ್ಕಾರದ ಹಾಗೂ ಸಾರ್ವಜನಿಕರ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದಲೇ ಹೊರತು ಯಾರ ಮೇಲೂ ದ್ವೇಷ ಸಾಧನೆಗೆ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದ್ದಾರೆ. ಹಾಸನದಲ್ಲಿ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಅವರ ಪೈಕಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
|