ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಆದಾಯದ (ಬಿಪಿಎಲ್) 31.29 ಲಕ್ಷ ಪಡಿತರ ಚೀಟಿಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 86 ಲಕ್ಷ ಬಿಪಿಎಲ್ ಕುಟುಂಬಗಳನ್ನು ಗುರುತಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರ 31.29 ಲಕ್ಷ ಪಡಿತರ ಚೀಟಿಗಳಿಗೆ ಮಾತ್ರ ಸಬ್ಸಿಡಿ ದರಗಳಲ್ಲಿ ಪಡಿತರ ವಿತರಿಸಲು ನೆರವು ನೀಡಲಿದೆ ಎಂದರು.
ಈಗಾಗಲೇ ವಿತರಿಸಲಾಗಿರುವ ಬಿಪಿಎಲ್ ಪಡಿತರ ಚೀಟಿಗಳ ಪೈಕಿ ಶೇ. 30 ರಷ್ಟು ಫಲಾನುಭವಿಗಳಲ್ಲದವರು ಚೀಟಿ ಪಡೆದಿದ್ದಾರೆ ಎಂದು ಹೇಳಿದ ಅವರು ಅವುಗಳನ್ನು ಗುರುತಿಸಲು ವಿಶೇಷ ಸಮೀಕ್ಷೆ ನಡೆಸುವುದಲ್ಲದೇ ಅಂಥ ಕಾರ್ಡ್‌ಗಳ ವಿತರಣೆ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಡಿತರ ಆಹಾರ ಪದಾರ್ಥಗಳ ದರ ಹೆಚ್ಚಿಸುವ ಚಿಂತನೆ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕಗಳನ್ನು ಈ ತಿಂಗಳ 3 ಅಥವಾ 4 ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
|