ಚಾಮಲಾಪುರ ಬಳಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಸರ್ಕಾರ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಶುಕ್ರವಾರ ಸ್ಪಷ್ಟಪಡಿಸಿದರು.
ಉದ್ದೇಶಿತ ವಿದ್ಯುತ್ ಸ್ಥಾವರವನ್ನು ವಿರೋಧಿಸುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಅವರು ಆರೋಪಿಸಿದರು.
ಬೆಂಗಳೂರು-ಮೈಸೂರು ನಾಲ್ಕು ಪಥ ರಸ್ತೆಗೆ ಸರ್ವೀಸ್ ರಸ್ತೆಗಳನ್ನು 750 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದ ಅವರು ಅಡ್ಡರಸ್ತೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಸುಮಾರು 4000 ಕೋಟಿ ರೂ.ಗಳ ವೆಚ್ಚದೊಂದಿಗೆ 400 ಕಿ.ಮೀ. ಬೆಂಗಳೂರು ಹೊರ ವರ್ತುಲ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದ ಅವರು ಇದಕ್ಕಾಗಿ ಟೆಂಡರಗಳನ್ನು ಕರೆಯಲಾಗಿದೆ ಎಂದರು.
ಬಿಎಂಐಸಿ ಯೋಜನೆಗೂ ಈ ರಸ್ರೆ ನಿರ್ಮಾಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಘಟಪ್ರಭಾ, ಚಾಮಲಾಪುರ, ಬಳ್ಳಾರಿ ಮುಂತಾದ ಆರು ಪ್ರದೇಶಗಳಲ್ಲಿ 4,500 ಕೊಟಿ ರೂ. ವೆಚ್ಚದಲ್ಲಿ 2000 ಮೆಗಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಚಾಮಲಾಪುರ ವಿದ್ಯುತ್ ಸ್ಥಾವರ ಸಂಬಂಧ ಸಚಿವ ರೇವಣ್ಣ ಅವರ ಹೇಳಿಕೆಯನ್ನು ವಿರೋಧಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
|