ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿರುವಂತೆಯೇ ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮೆರಾಜುದ್ದೀನ್ ಪಟೇಲ್‌ರನ್ನು ನೇಮಿಸಿರುವುದರ ಹಿಂದೆ ಚತುರ ರಾಜಕಾರಣವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಮ್ಮಿಶ್ರ ಸರಕಾರದ ಅಧಿಕಾರ ಹಸ್ತಾಂತರಕ್ಕೆ ಸರಿಯಾಗಿ ಒಂದು ತಿಂಗಳು ಇರುವಾಗ ಮತ್ತು ಉಭಯ ಪಕ್ಷಗಳ ನಡುವಣ ಸಂಬಂಧ ಹಳಸಲಾಗುವ ಸೂಚನೆಗಳೊಂದಿಗೆ ಈ ಕ್ರಮ ಕೈಗೊಂಡಿರುವ ಮಾಜಿ ಪ್ರಧಾನಿ ಗೌಡರು, ಚತುರ ರಾಜಕಾರಣಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಒಂದೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಮತ್ತು ಇನ್ನೊಂದೆಡೆ ಅಧಿಕಾರ ಸ್ವೀಕಾರಕ್ಕಾಗಿ ತುದಿಗಾಲಲ್ಲಿ ನಿಂತಿರುವ ಬಿಜೆಪಿಯನ್ನು ಕಕ್ಕಾಬಿಕ್ಕಿ ಮಾಡಲು ದೇವೇಗೌಡರು ರಾಜಕೀಯ ದಾಳವನ್ನು ಎಸೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೋಮುವಾದಿ ಪಕ್ಷ ಎಂಬ ಬಿರುದಿರುವ ಬಿಜೆಪಿ ಪಾಲುಗಾರಿಕೆಯಲ್ಲಿ ಸರಕಾರ ನಡೆಸುತ್ತಲೇ ಮುಸ್ಲಿಂ ನಾಯಕನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ದೇವೇಗೌಡರ ರಾಜಕೀಯ ವ್ಯೂಹವು ಬಿಜೆಪಿ ಪಾಳಯದಲ್ಲಿ ಆತಂಕ ಅಲೆಗಳನ್ನು ಸೃಷ್ಟಿಸುತ್ತಿದೆ.
ಅಧಿಕಾರ ಹಸ್ತಾಂತರಕ್ಕೆ ತಾವು ಸಿದ್ಧ ಎಂದು ಹೇಳುತ್ತಲೇ, ತಮ್ಮ ತಂದೆಯವರು ಬಿಜೆಪಿಗೆ ಅಧಿಕಾರ ಹಸ್ತಾಂತರ ಕುರಿತಂತೆ ನೀಡಿರುವ ಹೇಳಿಕೆಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಂದೆಗೆ ತಕ್ಕ ಮಗ ಎಂದು ಸಾಬೀತು ಪಡಿಸಿದ್ದಾರೆ.
ಏತನ್ಮಧ್ಯೆ, ಮೈಸೂರಿನಲ್ಲಿ ದಕ್ಷಿಣ ಕರ್ನಾಟಕ ಪ್ರಾಂತ ಬೈಠಕ್ ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು, ಅಧಿಕಾರ ನೀಡುವಲ್ಲಿ ಜೆಡಿಎಸ್ ಕೈಕೊಟ್ಟರೆ ಏನು ಮಾಡಬೇಕು ಎಂಬುದನ್ನು ಕುರಿತು ಮುಖ್ಯಮಂತ್ರಿ ಕುರ್ಚಿ ಏರಲು ಹಾತೊರೆಯುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಹೇಳುತ್ತಿದೆ ಎನ್ನಲಾಗಿದೆ.
ಕರ್ನಾಟಕದ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಕಿಂಚಿತ್ ಜ್ಞಾನವಿದ್ದವರಿಗೂ ಗೊತ್ತಿರುವಂತೆ ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಬಿಜೆಪಿಗೆ ಜನರ ಅನುಕಂಪ ದೊರೆಯುತ್ತದೆ. ಕೊಟ್ಟರೂ ಸರಕಾರವನ್ನು ಸುಗಮವಾಗಿ ನಡೆಸಲು ಜೆಡಿಎಸ್ ಬಿಡುವುದಿಲ್ಲ ಎಂದು ಆರ್ಎಸ್ಎಸ್ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್, ಪ್ರಚಾರ ವಿಭಾಗದ ಪ್ರಮುಖರಾದ ಚಂದ್ರಶೇಖರ ಭಂಡಾರಿ, ಬೆಂಗಳೂರು ಘಟಕದ ಮುಖ್ಯಸ್ಥ ರಾಘವೇಂದ್ರರಾವ್ ಮುಂತಾದ ಮುಖಂಡರು ಯಡಿಯೂರಪ್ಪನವರಿಗೆ ಬೋಧನೆ ಮಾಡಿದ್ದಾರೆ.
|