ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪಕ್ಷದ ವರಿಷ್ಠ ದೇವೇಗೌಡರಿಂದ ನೇಮಕಗೊಂಡಿದ್ದ ಮೆರಾಜುದ್ದೀನ್ ಪಟೇಲ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಆ ಸಂದರ್ಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಮಂಡಿಸಿರುವ ಬಜೆಟ್ ಜೆಡಿಎಸ್ ಸಾಧನೆ ಎಂದು ಬಣ್ಣಿಸಿದ್ದಾರೆ.
ದುರುದ್ದೇಶ ಇಲ್ಲ: ಮೆರಾಜುದ್ದೀನ್ ಪಟೇಲ್ ನೇಮಕದ ಹಿಂದೆ ಯಾವ ರಾಜಕೀಯ ದುರುದ್ದೇಶವೂ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಮರಾಜನಗರದಲ್ಲಿ ಹೇಳಿದ್ದಾರೆ. ಯಾವುದೋ ಒಂದು ವರ್ಗವನ್ನು ಓಲೈಸಲು ಮೆರಾಜುದ್ದೀನ್ ಪಟೇಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ತಿಂಗಳು ಅಧಿಕಾರ ಹಸ್ತಾಂತರ ಖಚಿತವಾಗಿದ್ದು, ತಾವು ಚಾಮರಾಜನಗರಕ್ಕೆ ಆಗಮಿಸಿದ್ದಕ್ಕಾಗಿ ಅಧಿಕಾರ ಕಳೆದುಕೊಳ್ಳುತ್ತಿರುವುದಾಗಿ ಭಾವಿಸುವಂತಿಲ್ಲ ಎಂದು ಹೇಳಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ಹುದ್ದೆಯನ್ನು ಕಳದುಕೊಳ್ಳುತ್ತಾರೆ ಎಂಬ ನಂಬಿಕೆ ಬಗೆಗಿನ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೋತಲಕಟ್ಟೆ ಗ್ರಾಮದಲ್ಲಿ ಮಂಗಳವಾರ ವಾಸ್ತವ್ಯ ಹೂಡಲಿದ್ದಾರೆ.
|