ರಾಜ್ಯದ ಸಮ್ಮಿಶ್ರ ಸರಕಾರದ ಸಾಧನೆಗಳೆಲ್ಲವೂ ನಮ್ಮ ಪಕ್ಷದ್ದೇ ಎಂದು ಹೇಳುವ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಆರಂಭಿಸಿದ ಮಾತಿನ ಸಮರಕ್ಕೆ ಸರಕಾರದ ದೋಸ್ತಿ ಪಕ್ಷ ಬಿಜೆಪಿ ತತ್ತರಿಸುತ್ತಿದೆ. ಆದರೂ ಅಧಿಕಾರ ಹಸ್ತಾಂತರ ಆಗುವ ವರೆಗೆ ಮೌನಕ್ಕೆ ಶರಣಾಗಲು ಬಿಜೆಪಿ ಮುಂದಾಗಿದೆ.
ಹೆಣ್ಣುಮಕ್ಕಳಿಗೆ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಹಾಗೂ ಕಡಿಮೆ ಬಡ್ಡಿಗೆ ರೈತರಿಗೆ ಸಾಲ ವಿತರಣೆ ಮುಂತಾದ ಜನ ಕಲ್ಯಾಣ ಕಾರ್ಯಕ್ರಮಗಳೆಲ್ಲವೂ ಜೆಡಿಎಸ್ ಪಕ್ಷ ರೂಪಿಸಿದ್ದ ಯೋಜನೆಗಳೇ ಎಂದು ಹೇಳುವ ಮೂಲಕ ಮೆರಾಜುದ್ದೀನ್ ಅವರು ಸರಕಾರದ ಅಂಗವಾಗಿರುವ ಪಕ್ಷ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಲು ಇಚ್ಛಿಸದ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ತಮ್ಮ ಪಕ್ಷದ ಅಧ್ಯಕ್ಷರು ಮಾತನಾಡುತ್ತಾರೆಯೇ ಹೊರತು ತಾವಲ್ಲ. ಸರಕಾರದ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾತ್ರ ತಾವು ಮಾತನಾಡಲು ಸಾಧ್ಯ ಎಂದಿದ್ದಾರೆ.
|