ರಾಜ್ಯಕ್ಕೆ ಸೀಮಿತವಾಗಿದ್ದ ಸಮ್ಮಿಶ್ರ ಸರ್ಕಾರಗಳ ದೋಸ್ತಿ ಪಕ್ಷಗಳ ಕುಸ್ತಿ ದೆಹಲಿಗೆ ಸ್ಥಳಾಂತರಗೊಂಡಿದೆ. ವಾಜಪೇಯಿ ಅವರಿಗೆ ಬಿಜೆಪಿ ದುರ್ನಡೆತ ಬಗ್ಗೆ ದೂರು ನೀಡುವುದಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಈ ಮಧ್ಯೆ ಹೇಳಿಕೆ ನೀಡಿದ್ದಾರೆ,
ಮಂಗಳವಾರ ಸಂಸತ್ ಆವರಣದಲ್ಲಿ, ಬ್ರಿಟಿಷರ ಎದೆ ನಡುಗಿಸಿದ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಾಗೇ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆ ಪಕ್ಷದ ರಾಜ್ಯಾಧ್ಯಕ್ಷ ಸದಾನಂದಗೌಡ ದೆಹಲಿಗೆ ತೆರಳಲಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಜನತಾದಳ (ಎಸ್) ನೂತನ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಅರವಿಂದ್ ದಳವಾಯಿ ಬಿಜೆಪಿಗೆ ಮತ್ತೊಂದು ಚಮಕ್ ನೀಡಿದ್ದಾರೆ.
ಮುಂದೆ ಅಧಿಕಾರ ಹಸ್ತಾಂತರಗೊಂಡನಂತರ ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಯಾವ ರೀತಿಯ ಅನ್ಯಾಯವೆಸಗುವುದಿಲ್ಲ ಎಂದು ಬಿಜೆಪಿ ಮುಚ್ಚಳಿಕೆ ಬರೆದುಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೈಕಾಲು ಮುರಿತೀನಿ ಅಂದೋರ ಜತೆ ಹೋಗೋದು ಹೇಗೆ ? ಎಂದು ಪ್ರಶ್ನಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಾತು ಕೇಳುವರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಈ ಬಗ್ಗೆ ವರದಿಗಳು ಊಹಾಪೋಹವಷ್ಟೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
|