ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ ಸಂಜೆ ಹೊರಬಿದ್ದಿದ್ದು, ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬಣದ ವಿರುದ್ಧ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಣ ಮೇಲುಗೈ ಸಾಧಿಸಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಡೆಯರ್ 36 ಮತಗಳಿಂದ ಜಿ.ಆರ್. ವಿಶ್ವನಾಥ್ ವಿರುದ್ಧ ಜಯಗಳಿಸಿದ್ದಾರೆ.ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಡೆಯರ್ ಬಣದ ಕಸ್ತೂರಿ ರಂಗನ್ ವಿರುದ್ಧ ಬ್ರಿಜೇಶ್ ಪಟೇಲ್ 94 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಒಡೆ ಯರ್‌ಗೆ ಅಧ್ಯಕ್ಷ ಸ್ಥಾನ, ಬ್ರಿಜೇಶ್ ಪಟೇಲ್ ಬಣಕ್ಕೆ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನ ಸಿಕ್ಕಿದೆ. ಶ್ರೀಕಂಠದತ್ತ ಒಡೆಯರ್ ಬಣಕ್ಕೆ 13 ಸ್ಥಾನ, ಬ್ರಿಜೇಶ್ ಪಟೇಲ್ ಬಣಕ್ಕೆ 11 ಸ್ಥಾನ ದೊರೆತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಎರಡು ಬಣಗಳ ನಡುವೆ ಕಿತ್ತಾಟ ಸಂಭವಿಸುವ ಲಕ್ಷಣಗಳು ಕಂಡುಬಂದಿವೆ.
ಬ್ರಿಜೇಶ್ ಬಣದಲ್ಲಿ ಡಾ.ಕೃಷ್ಣಮೂರ್ತಿ, ಮಾಜಿ ಟೆಸ್ಟ್ ಆಟಗಾರ ರೋಜರ್ ಬಿನ್ನಿ ಚುನಾಯಿತರಾದರೆ ಒಡೆಯರ್ ಬಣದ ಪಿ.ಆರ್. ಅಶೋಕಾನಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಖಜಾಂಚಿಯಾಗಿ ಬ್ರಿಜೇಶ್ ಬಣದ ತಲ್ಲಂ ವೆಂಕಟೇಶ್ ಗೆದ್ದಿದ್ದಾರೆ.
ಆಡಳಿತ ಸಮಿತಿಯಲ್ಲಿ ಬ್ರಿಜೇಶ್ ಪಟೇಲ್ ಬಣದ ನಾಲ್ವರು ಹಾಗೂ ಒಡೆಯರ್ ಬಣದ ಇಬ್ಬರು ಆಯ್ಕೆ ಯಾಗಿದ್ದಾರೆ. ಈ ಬಾರಿ ದಾಖಲೆಯೆಂಬಂತೆ 1404 ಮತಗಳಲ್ಲಿ 1082 ಮತ ಚಲಾವಣೆ ಯಾಗಿದೆ. ಇದರಿಂದ ಚುನಾವಣಾ ಫಲಿತಾಂಶದ ಬಗ್ಗೆ ಅತ್ಯಂತ ಕುತೂಹಲ ನಿರ್ಮಾಣವಾಗಿತ್ತು.
ಮದ್ಯದ ದೊರೆ ವಿಜಯಮಲ್ಯ ಬೆಳಗ್ಗೆ ನಡೆದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಆ ಬಳಿಕ ಮತ ಚಲಾಯಿಸಿ ಗಮನ ಸೆಳೆದರು.
|